ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ನಡುವೆ ದಶಕಗಳಿಂದ ವ್ಯಾಜ್ಯವಿದೆ. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಅಲರ್ಟ್ ಆಗಿರುವ ಮಹಾರಾಷ್ಟ್ರ ಹಾಗೂ ಗೋವಾದಲ್ಲಿನ ಬಿಜೆಪಿ ಸರ್ಕಾರಗಳು ಒಗ್ಗಟ್ಟಾಗಿ ಕರ್ನಾಟಕದ ವಿರುದ್ಧ ಹೋರಾಟಕ್ಕೆ ಮುಂದಾಗಿವೆ. ಒಂದೆಡೆ ನಿರಂತರವಾಗಿ ಗಡಿ ಕ್ಯಾತೆ ತೆಗೆಯುತ್ತಲೇ ಕಾಲು ಕೆರೆದುಕೊಂಡು ಕರ್ನಾಟಕದ ಜೊತೆಗೆ ಜಗಳಕ್ಕೆ ನಿಲ್ಲುವ ಮಹಾರಾಷ್ಟ್ರ ಸರ್ಕಾರ ಈಗ ಮಹದಾಯಿ ವಿಚಾರದಲ್ಲೂ ಮೂಗು ತೂರಿಸಲು ಮುಂದಾಗಿದೆ.
ಮಹಾರಾಷ್ಟ್ರದ ತಿಲಾರಿ ಅಣೆಕಟ್ಟು ಯೋಜನೆ ಸಂಬಂಧ ಶನಿವಾರ ಮುಂಬೈನಲ್ಲಿ ಅಂತಾರಾಜ್ಯ ನಿಯಂತ್ರಣ ಮಂಡಳಿಯ ಸಭೆ ನಡೆದಿದೆ. ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಗೋವಾ ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ಭಾಗಿಯಾಗಿದ್ದರು. ದಶಕದ ಬಳಿಕ ನಡೆದ ಅಂತಾರಾಜ್ಯ ನಿಯಂತ್ರಣ ಮಂಡಳಿ ಸಭೆಯಲ್ಲಿ ತಿಲಾರಿ ಅಣೆಕಟ್ಟು ಯೋಜನೆ ನೆಪದಲ್ಲಿ ಮಹದಾಯಿ ವಿವಾದದ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ.
"ಗೋವಾ ಮತ್ತು ಮಹಾರಾಷ್ಟ್ರ ಈ ಎರಡೂ ರಾಜ್ಯಗಳು ಸಹೋದರರಿದ್ದಂತೆ. ಮಹದಾಯಿ ನೀರಿನ ಹೋರಾಟ ಮೂರು ರಾಜ್ಯಗಳ ಪ್ರಶ್ನೆಯಾಗಿದ್ದು, ಮಹಾರಾಷ್ಟ್ರ ಮತ್ತು ಗೋವಾ ಈ ಹೋರಾಟವನ್ನು ಒಟ್ಟಾಗಿ ಎದುರಿಸಲಿವೆ" ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
2018ರಲ್ಲಿ ನ್ಯಾಯಮಂಡಳಿಯು ಮಹದಾಯಿ ನದಿ ಜಲಾನಯನ ಪ್ರದೇಶದಿಂದ ಕರ್ನಾಟಕಕ್ಕೆ 13.42 ಟಿಎಂಸಿ, ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಮತ್ತು ಗೋವಾಕ್ಕೆ 24 ಟಿಎಂಸಿ ನೀರನ್ನು ಹಂಚಿತ್ತು. ಕರ್ನಾಟದಕದ ಪಾಲಿಗೆ ದೊರೆತ ನೀರು 5.5 ಟಿಎಂಸಿ ಕುಡಿಯುವ ನೀರಿನ ಪೂರೈಕೆ ಹಾಗೂ 8.02 ಟಿಎಂಸಿ ನೀರು ಜಲವಿದ್ಯುತ್ ಉತ್ಪಾದನೆಗೆ ಎಂದು ಹಂಚಿಕೆಯಾಗಿತ್ತು. ಹೀಗಿದ್ದರೂ ಕರ್ನಾಟಕ ವಿರುದ್ಧ ಹಗೆ ಸಾಧಿಸಲು ಗೋವಾ ಜೊತೆಗೆ ಮಹಾರಾಷ್ಟ್ರ ಸರ್ಕಾರ ಕೈ ಜೋಡಿಸುತ್ತಿದೆ.
ಸಭೆಯಲ್ಲಿ ಮಹದಾಯಿ ನೀರಿಗಾಗಿ ಗೋವಾ ಮತ್ತು ಮಹಾರಾಷ್ಟ್ರ ಒಟ್ಟಾಗಿ ಕರ್ನಾಟಕದ ವಿರುದ್ಧ ಹೋರಾಟ ಮಾಡುತ್ತವೆ ಎಂದು ಮಹಾರಾಷ್ಟ್ರ ಸಿಎಂ ಶಿಂಧೆ ಹೇಳಿದ್ದಾರೆ. ಇದರಿಂದಾಗಿ ಮಹದಾಯಿ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕಳಸಾ ಬಂಡೂರಿ ಯೋಜನೆಗೆ ಸಿಕ್ತು ಅನುಮತಿ: ಹೀಗಿದೆ ಹೋರಾಟದ ಹಾದಿ..
ಯೋಜನೆಗೆ ಅನುಮತಿ ನೀಡದಂತೆ ವಾದ ಮಂಡಿಸಿದ್ದ ಗೋವಾ: ಮಹದಾಯಿ ನದಿಯಿಂದ ಕರ್ನಾಟಕಕ್ಕೆ ನೀರು ಹರಿಸುವ ಕುರಿತಂತೆ ಯಾವುದೇ ಪರಿಸರಾತ್ಮಕ ಅನುಮತಿ ನೀಡದಂತೆ ಈ ಮೊದಲು ಬೆಂಗಳೂರು ಮತ್ತು ನವದೆಹಲಿಯಲ್ಲಿರುವ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಅರಣ್ಯ)ಯ ಮುಂದೆ ಗೋವಾ ಸರ್ಕಾರ ಪ್ರಬಲ ವಾದ ಮಂಡಿಸಿತ್ತು. 3.9 ಟಿಎಂಸಿ ನೀರನ್ನು ತಿರುಗಿಸಲು ನ್ಯಾಯಮಂಡಳಿ ನೀಡಿರುವ ಅನುಮತಿ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರುವುದಾಗಿ ಈ ಮೊದಲು ಗೋವಾ ಸಿಎಂ ಸಾವಂತ್ ತಿಳಿಸಿದ್ದರು.
ಮಹದಾಯಿ ನದಿ ವಿವಾದವು 80 ರ ದಶಕದಿಂದ ಆರಂಭವಾಗಿದ್ದು, ಇನ್ನೂ ಬಗೆಹರಿದಿಲ್ಲ. ಮಹದಾಯಿ ನದಿ ನೀರನ್ನು ಮಲಪ್ರಭಾ ಜಲಾನಯನ ಪ್ರದೇಶಕ್ಕೆ ಹರಿಸಿ ನೀರಿನ ಸಮಸ್ಯೆ ನಿವಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಗೆಯಿಂದ ಬಾಗಲಕೋಟೆ, ಗದಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಜನರಿಗೆ ಅನುಕೂಲ ಆಗಲಿದೆ.
ಇದನ್ನೂ ಓದಿ: ಮಹದಾಯಿ ನದಿ ವಿವಾದ, ರಾಜ್ಯಕ್ಕೆ ಗೆಲುವು... ಕೇಂದ್ರದಿಂದ ಅಧಿಸೂಚನೆ