ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ 72 ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ. ನಾವು 150 ಸೀಟ್ ಗೆದ್ದು ಕರ್ನಾಟಕದಲ್ಲಿ ಇತಿಹಾಸ ನಿರ್ಮಿಸುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಸೋಲಾಗುತ್ತದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಬೆಳಗಾವಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಕಿತ್ತೂರು ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ರೋಡ್ ಶೋನಲ್ಲಿ ಸಾವಿರಾರು ಜನರು ಉತ್ಸಾಹದಿಂದ ಭಾಗಿಯಾಗಿದ್ದು ನೋಡಿದರೆ ಬೆಳಗಾವಿ ಜಿಲ್ಲೆಯಲ್ಲಿ ಅತ್ಯಧಿಕ ಕ್ಷೇತ್ರಗಳಲ್ಲಿ ಜಯ ಸಾಧಿಸಿ ಬಿಜೆಪಿ ಇತಿಹಾಸ ಸೃಷ್ಟಿಸುತ್ತದೆ. ಅಭ್ಯರ್ಥಿಗಳ ಪಟ್ಟಿ ನೋಡಿದ್ರೆ ಮೋದಿ ವಿಷನ್ ಪೂರ್ಣ ಆಗೋದು ಖಚಿತ ಎಂದರು.
ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ. ಮೂರು ವರ್ಷಗಳಲ್ಲಿ ಬಿಜೆಪಿ ಕೆಲಸದ ಸಮೀಕ್ಷೆ ಮಾಡಿ ನೋಡಿದಾಗ, ಕಾಂಗ್ರೆಸ್ 5 ದಶಕಗಳಲ್ಲಿ ಮಾಡಿರದಷ್ಟು ಕೆಲಸವಾಗಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ, ಹೆಲಿಕಾಪ್ಟರ್ ನಿರ್ಮಾಣ ಕಾರ್ಖಾನೆ ಉದ್ಘಾಟನೆ, ವಂದೇ ಭಾರತ್, ಮೆಟ್ರೋ ರೈಲು ಉದ್ಘಾಟನೆ, ನಾಡಪ್ರಭು ಕೆಂಪೇಗೌಡ ಮೂರ್ತಿ ಪ್ರತಿಷ್ಠಾಪನೆ ಯಡಿಯೂರಪ್ಪ ಸರ್ಕಾರದಲ್ಲಿ ಅನುಭವ ಮಂಟಪ ನಿರ್ಮಾಣವಾಗಿದೆ ಎಂದು ಹೇಳಿದರು.
ಕರ್ನಾಟಕ ಗೌರವ ಮತ್ತು ಸಂಸ್ಕೃತಿ ಹೆಚ್ಚುವ ಕೆಲಸವನ್ನೂ ಬಿಜೆಪಿ ಸರ್ಕಾರ ಮಾಡಿದೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಮರಾಠಾ ಅಭಿವೃದ್ಧಿ ನಿಗಮವನ್ನೂ ಬಿಜೆಪಿ ಸರ್ಕಾರ ಸ್ಥಾಪಿಸಿದೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು ಬಿಜೆಪಿ ಸರ್ಕಾರ. ರಾಣಿ ಚನ್ನಮ್ಮಳ ಜನ್ಮಸ್ಥಳ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ಛತ್ರಪತಿ ಶಿವಾಜಿ ಮಹಾರಾಜರ ಅತೀ ಎತ್ತರದ ಮೂರ್ತಿಯನ್ನು ಸರ್ಕಾರ ಮಾಡಿದೆ. ಕರ್ನಾಟಕ, ಬೆಳಗಾವಿ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಏನೂ ಮಾಡಿಲ್ಲ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ. ಬೆಳಗಾವಿ ಜಿಲ್ಲೆಯ 5 ಲಕ್ಷ 40 ಸಾವಿರ ಕಿಸಾನ್ ಸಮ್ಮಾನ್ ನಿಧಿಯ 10 ಸಾವಿರ ಹಣ ನೇರವಾಗಿ ರೈತರ ಖಾತೆಗೆ ಹೋಗಿದೆ. 4 ಲಕ್ಷ 19 ಸಾವಿರ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕೊಟ್ಟಿದ್ದೇವೆ. ನಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಪೈಕಿ 5 ದಶಕಗಳಲ್ಲಿ ಒಂದನ್ನೂ ಮಾಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಬಿಜೆಪಿಯಿಂದ ಸಿಎಂ ಘೋಷಣೆ ಯಾಕೆ ಮಾಡುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಕಾಮನ್ ಮ್ಯಾನ್ ರೀತಿ ಸಿಎಂ ಬೊಮ್ಮಾಯಿ ಅತ್ಯುತ್ತಮ ಆಡಳಿತ ನೀಡುತ್ತಿದ್ದಾರೆ. ಚುನಾವಣೆ ಕ್ಯಾಂಪೇನ್ ಕಮಿಟಿ ಚೇರ್ಮನ್ ಅವರೇ ಇದ್ದಾರೆ. ಅವರ ನೇತೃತ್ವದಲ್ಲಿ ಚುನಾವಣೆ ಮಾಡುತ್ತಿದ್ದೇವೆ ಎಂದ ಅರುಣ್ ಸಿಂಗ್, ಮುಂದಿನ ಸಿಎಂ ಬೊಮ್ಮಾಯಿ ಎನ್ನುವ ಬಗ್ಗೆ ಸ್ಪಷ್ಟನೆ ನೀಡಲು ನಿರಾಕರಿಸಿದರು.
ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ತುಕಡೇ ತುಕಡೇ ಗ್ಯಾಂಗ್‌ನವರಿದ್ದಾರೆ. ಪಟ್ಟಿಯಲ್ಲಿ 10 ಜನರು ದೇಶದ್ರೋಹ ಕೇಸ್, ಮಹಿಳೆಯರಿಗೆ ಅಪಮಾನ ಮಾಡಿದವರಿದ್ದಾರೆ. ಗಲಭೆಕೋರರ ಜತೆ ಕೈ ಜೋಡಿಸಿದವರು ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ದೇಶಕ್ಕೆ ಅಪಮಾನ ಮಾಡಿದವರು, ಪ್ರತ್ಯೇಕವಾದಿಗಳು ಇದ್ದಾರೆ ಎಂದು ಟೀಕಿಸಿದರು.
ನಮ್ಮ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ನರೇಂದ್ರ ಮೋದಿ ಇದ್ದಾರೆ. ಪ್ರಚಾರ ಶುರುವಾದ ಮೇಲೆ ಕಾಂಗ್ರೆಸ್‌ನವರು ಮನೆಗೆ ಹೋಗುತ್ತಾರೆ. ರಾಹುಲ್ ಗಾಂಧಿ ಎಲ್ಲಿ ಪ್ರಚಾರಕ್ಕೆ ಹೋಗ್ತಾರೋ ಅಲ್ಲಿ ಅವರ ಮತಗಳು ಕಡಿಮೆಯಾಗುತ್ತವೆ. ಚುನಾವಣೆ ನಡೆದ ಎಲ್ಲ ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ ಎಂದರು.
ಇದನ್ನೂಓದಿ: ನಾಮಪತ್ರ ತಿರಸ್ಕಾರ ಮಾಡಿಸುವ ಕುತಂತ್ರ ನಡೆದಿದೆ ಎಂಬ ಡಿಕೆ ಸುರೇಶ್ ಹೇಳಿಕೆಗೆ ಸಿಎಂ ತಿರುಗೇಟು