ಚಿಕ್ಕೋಡಿ (ಬೆಳಗಾವಿ) : ಅಥಣಿ ಕ್ಷೇತ್ರದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಸೋಲಿನ ಭೀತಿ ಎದುರಾಗಿದೆ ಎಂದು ನಾನು ಬಹಿರಂಗ ಸಭೆಯಲ್ಲಿ ಹೇಳಿದ್ದೇನೆ. ಆ ಹೇಳಿಕೆಯನ್ನು ರಮೇಶ್ ಜಾರಕಿಹೊಳಿ ಯಾಕೆ ಅಪಾರ್ಥ ಮಾಡಿಕೊಂಡಿದ್ದಾರೆ ಎಂದು ಗೊತ್ತಿಲ್ಲ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ನಯವಾಗಿ ತಿರುಗೇಟು ನೀಡಿದ್ದಾರೆ. ಇಂದು ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತ ನಾಗೇಶ್ ಮನ್ನೋಳಕರ್ ಅವರ ಸಂಬಂಧಿಯ ಕಾರ್ಖಾನೆ ಪೂಜೆಗೆ ಮಹಾರಾಷ್ಟ್ರದ ಶಿನೋಳಿ ಗ್ರಾಮಕ್ಕೆ ಹೋಗಿದ್ದ ಸಂದರ್ಭದಲ್ಲಿ, "ಯಾಕಿಷ್ಟು ಚಪಡಿಸುತ್ತಿಯಪ್ಪಾ, ಲಕ್ಷ್ಮಣ ಅಣ್ಣಾ ಆರಾಮಾಗಿರು" ಎಂದು ಹೇಳಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿಯಲ್ಲಿ ತಮಗೆ ವಾಲ್ಮೀಕಿ ಸಮುದಾಯದ ಬೆಂಬಲ ನೀಡಿದ ಸಭೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಲಕ್ಷ್ಮಣ್ ಸವದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಯಾವ ಅರ್ಥದಲ್ಲಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಅವರ ಬಗ್ಗೆ ಸೋಲಿನ ವಾತಾವರಣ ನಿರ್ಮಾಣವಾಗಿದೆ. ನಾನು ಇಪ್ಪತ್ತು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಇರುವುದರಿಂದ ನನಗೆ ಜನರ ಭಾವನೆ ಅರ್ಥ ಆಗುತ್ತದೆ.
ಅಕಸ್ಮಾತ್ ಮಹೇಶ್ ಕುಮಟಳ್ಳಿ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸೋಲಾದರೆ ಯಾರೂ ಕೂಡ ನನ್ನ ಮೇಲೆ ಹೊರೆ ಹಾಕಬಾರದು ಎಂಬ ಭಾವನೆಯಿಂದ ನಾನು ಬಹಿರಂಗ ಸಭೆಯಲ್ಲಿ ಆ "ಸೋಲಿನ ಹಣೆ ಪಟ್ಟಿ ನನ್ನ ಮ್ಯಾಲ ಕಟ್ಟಬ್ಯಾಡ್ರಿ" ಎಂದು ಹೇಳಿದ್ದೆ. ಅದನ್ನು ಯಾಕೆ ರಮೇಶ್ ಜಾರಕಿಹೊಳಿ ಅಪಾರ್ಥ ಮಾಡಿಕೊಂಡು, ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾನು ಭೇಟಿ ಆದಾಗ ಈ ವಿಚಾರವಾಗಿ ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಸವದಿ ಹೇಳಿದರು.
ಮುಂದುವರೆದು ಮಾತನಾಡಿದ ಅವರು, ತಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೇ ಬೇಡವೇ ಎಂಬ ಬಗ್ಗೆ ಕ್ಷೇತ್ರದ ಸಮುದಾಯಗಳ ಮುಖಂಡರ ಬಳಿ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಈಗಾಗಲೇ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಅನೇಕ ಸಮುದಾಯಗಳು ಬೆಂಬಲ ನೀಡುತ್ತಿದ್ದಾರೆ. ಪಕ್ಷ ನನಗೆ ಟಿಕೆಟ್ ನೀಡುವ ವಿಶ್ವಾಸವಿದೆ ಎಂದರು.
ಲಕ್ಷ್ಮಣ್ ಸವದಿ ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ಸುದ್ದಿ ಈಗಾಗಲೇ ರಾಜಕೀಯ ರಂಗದಲ್ಲಿ ಹರಿದಾಡುತ್ತಿದ್ದು, ಈ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಲವು ಗುಮಾನಿ ಕೇಳಿ ಬರುತ್ತಿದೆ. ಆದರೆ ಇವತ್ತಿನವರಿಗೆ ಯಾವುದೇ ರೀತಿ ಆಲೋಚನೆ ಮಾಡಿಲ್ಲ. ನಾಳೆ ಪಕ್ಷ ಯಾವ ಸೂಚನೆ ನೀಡುತ್ತದೆ ಎಂಬುದರ ಮೇಲೆ ಈ ಎಲ್ಲವೂ ನಿಂತಿದೆ ಎಂಬ ಅಚ್ಚರಿಯ ಹೇಳಿಕೆ ಕೊಟ್ಟರು.
ಇದನ್ನೂ ಓದಿ: ಮಹೇಶ ಕುಮಠಳ್ಳಿಗೆ ನೂರಕ್ಕೆ ನೂರರಷ್ಟು ಟಿಕೆಟ್ ಸಿಗುವ ಬಗ್ಗೆ ವಿಶ್ವಾಸವಿದೆ: ರಮೇಶ ಜಾರಕಿಹೊಳಿ