ಚಿಕ್ಕೋಡಿ: ನನಗೆ ಆರ್ಎಸ್ಎಸ್ ನವರು ಮತ ನೀಡುತ್ತಾರೆ, RSS ನಲ್ಲಿ ನನ್ನ ಹಿತೈಷಿಗಳಿದ್ದಾರೆ. ಆಂತರಿಕವಾಗಿ ನನ್ನ ಜೊತೆಗೆ ಇದ್ದಾರೆ. ಗುಪ್ತ ಮತದಾನ ಇರುವುದರಿಂದ ಅವರು ಸಹ ಗುಪ್ತವಾಗಿ ನನಗೆ ಮತ ಹಾಕುತ್ತಾರೆ. ನೂರಕ್ಕೆ ನೂರರಷ್ಟು RSS ನವರು ನನಗೆ ಮತ ಹಾಕುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರ ಈ ಹೇಳಿಕೆ ಈಗ ಅಚ್ಚರಿಗೂ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದ ಅಧಿಕೃತವಾದ ಅಭ್ಯರ್ಥಿಯಾಗಿ ಲಕ್ಷ್ಮಣ್ ಸವದಿ ಅಥಣಿ ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಕೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರ್ಎಸ್ಎಸ್ನಲ್ಲೂ ನನಗೆ ಸ್ನೇಹಿತರು ಇದ್ದಾರೆ. ಇದರಿಂದ ನನಗೆ ನೂರಕ್ಕೂ ನೂರರಷ್ಟು ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಆಗಮಿಸಿದಾಗ ಇಲ್ಲಿನ 11 ಜನ ಟಿಕೆಟ್ ಆಕಾಂಕ್ಷಿಗಳು ಹಾಗೂ ಸಾವಿರಾರು ಜನ ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ಬರಮಾಡಿಕೊಂಡು ಧೈರ್ಯ ತುಂಬಿದ್ದಾರೆ. ನನಗೆ ವಿಶ್ವಾಸವಿದೆ. ಈ ಸಲ ನನ್ನ ಗೆಲುವು ಪಕ್ಕಾ ಎಂದು ತಿಳಿಸಿದರು.
ಇಂದು ಬಹಳ ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರು ಆಗಮಿಸಿ "ಆಗೆ ಬಡೋ ತುಮ್ಹಾರಾ ಸಾಥ್ ಹಮ್ ಹೈ" ಎಂಬ ಘೋಷಣೆಯ ಮೂಲಕ ನನಗೆ ಧೈರ್ಯ ತುಂಬುವುದರ ಜೊತೆಗೆ ಮನಸಾರೆ ಕಾಂಗ್ರೆಸ್ ಪಕ್ಷದ ಪರವಾಗಿ ಕಾರ್ಯ ಮಾಡ್ತೀವಿ ಎಂದು ಹೇಳುತ್ತಿದ್ದಾರೆ. ಎಷ್ಟು ಅಂತರದಿಂದ ಜಯ ಸಾಧಿಸಬಹುದು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಫಲಿತಾಂಶ ಬಂದ ದಿನ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳಿದರು.
ನಾಮಪತ್ರ ಸಲ್ಲಿಸುವ ಮೊದಲು ಸವದಿ ಟೆಂಪಲ್ ರನ್: ನಾಮಪತ್ರ ಸಲ್ಲಿಸುವ ಮೊದಲು ಲಕ್ಷ್ಮಣ್ ಸವದಿ ಅಥಣಿ ಪಟ್ಟಣದ ಪ್ರಮುಖ ದೇವಾಲಯಗಳ ದರ್ಶನ ಪಡೆದುಕೊಂಡರು. ಅಥಣಿ ಮುರುಘೇಂದ್ರ ಶಿವಯೋಗಿಗಳ ಹಾಗೂ ಸಿದ್ದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಸವದಿ ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ಶಕ್ತಿ ಪ್ರದರ್ಶನ: ಇವತ್ತು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ನಾಮಪತ್ರ ಸಲ್ಲಿಸಿದರು. ಈ ವೇಳೆ, ಸಾವಿರಾರು ಕಾರ್ಯಕರ್ತರು ಜೊತೆಯಾಗಿ ಅದ್ಧೂರಿಯಾಗಿ ಸಿದ್ಧೇಶ್ವರ ದೇವಾಲಯದವರೆಗೆ ಪಾದಯಾತ್ರೆ ನಡೆಸಿದರು. ಈ ಬೃಹತ್ ರೋಡ್ ಶೋ ವೇಳೆ ಕಿಲೋಮೀಟರ್ ದೂರದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಯಿತು.
ಇದನ್ನೂ ಓದಿ : ರಾಜ್ಯದ ಅಭ್ಯರ್ಥಿಗಳಲ್ಲಿ ಇವರೇ ಸೀನಿಯರ್.. 92ನೇ ವಯಸ್ಸಿನಲ್ಲೂ ಶಾಮನೂರು ಶಿವಶಂಕರಪ್ಪ ಚುನಾವಣಾ ರಣೋತ್ಸಾಹ!
ಆರನೇ ಬಾರಿಗೆ ನಾಮಪತ್ರ ಸಲ್ಲಿಸಿದ ಸವದಿ: 1999, 2004, 2008, 2013, 2018, 2023 ಈ ಆರು ವಿಧಾನಸಭಾ ಚುನಾವಣೆಯಲ್ಲಿ ಎರಡು ಚುನಾವಣೆಯಲ್ಲಿ ಸವದಿ ಸೋತಿದ್ದಾರೆ. ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಅಂದರೆ 2023 ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇದನ್ನೂ ಓದಿ : 'ನನಗೆ ಟಿಕೆಟ್ ತಪ್ಪಲು ಬಿ ಎಲ್ ಸಂತೋಷ್ ಕಾರಣ.. ಮಾನಸ ಪುತ್ರನ ಮೇಲಿನ ಪ್ರೇಮಕ್ಕೆ ನನ್ನ ಬಲಿ ಕೊಟ್ಟರು'