ಚಿಕ್ಕೋಡಿ: ಲಕ್ಷ್ಮಣ್ ಸವದಿ ಪಕ್ಷ ಬಿಟ್ಟಿರುವುದು ಬೇಜಾರಾಗಿದೆ. ನಮ್ಮ ಪಕ್ಷದಲ್ಲಿ ಅವರಿಗೆ ಡಿಸಿಎಂ ಸ್ಥಾನಮಾನಗಳನ್ನು ಕೊಟ್ಟಿದ್ರು. ಆದರೆ ಕೆಲವೊಂದಿಷ್ಟು ಕಾರಣಗಳಿಂದ ಅವರು ಪಕ್ಷ ಬಿಟ್ಟರು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಚಿಕ್ಕೋಡಿ ವಿಧಾನಸಭಾ ಕ್ಷೇತ್ರದಲ್ಲಿಂದು ಬಿಜೆಪಿ ಅಭ್ಯರ್ಥಿ ರಮೇಶ್ ಕತ್ತಿ ಪರ ಕಾರ್ಯಕರ್ತರ ಸಭೆ ಮುಗಿದ ನಂತರ ಮಾತನಾಡಿ, ಯಾವುದೇ ಪಕ್ಷದಲ್ಲಿಯೂ ಒಬ್ಬ ವ್ಯಕ್ತಿಗೆ ಆಯಾ ಸಂದರ್ಭಗಳಲ್ಲಿ ಬೇಜಾರಾಗುವ ಹಾಗೂ ಖುಷಿ ನೀಡುವ ಸಂಗತಿಗಳು ಜರುಗುತ್ತವೆ. ಅವುಗಳನ್ನು ಸಹನೆಯಿಂದ ನಿಭಾಯಿಸಬೇಕಿರುತ್ತದೆ. ಲಕ್ಷ್ಮಣ ಸವದಿ ದುಡುಕಿದ್ರಾ ಅನ್ನೋ ಮನೋಭಾವ ಕಾಡುತ್ತಿದೆ ಎಂದರು.
ಅವರು ಪಕ್ಷದ ಹಿರಿಯ ಮುಖಂಡರಾಗಿದ್ರು. ಅವರ ಕಡೆಗೆ ಪಕ್ಷ ಗಮನ ಕೊಡ್ತಿತ್ತು. ಕೆಲವೊಂದು ನೋವಿನ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದರು. ರಮೇಶ ಜಾರಕಿಹೊಳಿ ಅವರಿಂದ ನನಗೆ ಈ ಪರಿಸ್ಥಿತಿ ಬಂದಿದೆ ಎಂಬ ಸವದಿ ಹೇಳಿಕೆ ವಿಚಾರವಾಗಿ ಮಾತನಾಡಿ, ಲಕ್ಷ್ಮಣ್ ಸವದಿ ಅವರ ಹೇಳಿಕೆ ನನ್ನ ಗಮನಕ್ಕಿಲ್ಲ. ಅದರ ಬಗ್ಗೆ ನಾನು ಮಾತನಾಡೋದು ಇಲ್ಲ. ಏನೇ ಇದ್ರೂ ಪಕ್ಷ ಅವರಿಗೆ ಉನ್ನತ ಸ್ಥಾನಮಾನ ನೀಡುತ್ತಿತ್ತು ಎಂದು ಹೇಳಿದರು.
ಅವರ ನಿರ್ಗಮನದಿಂದ ಈ ಭಾಗದಲ್ಲಿ ಯಾವುದೇ ಪೆಟ್ಟು ಬೀಳದಂತೆ, ನಮ್ಮ ಸ್ಥಾನಮಾನಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಎಲ್ಲ ಕ್ಷೇತ್ರಗಳಲ್ಲಿಯೂ ಜನರಿಂದ ಉತ್ತಮ ಬೆಂಬಲ ಸಿಗುತ್ತಿದೆ. ನನ್ನ ಕ್ಷೇತ್ರದಲ್ಲಿಯೂ ಬಿಜೆಪಿ ವಿಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕೋಡಿ ವಿಭಾಗದ ಕಾರ್ಯಕರ್ತರ ಪೂರ್ವಭಾವಿ ಸಭೆಗೆ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರಲ್ಲಿ ಉತ್ಸಾಹ ನೋಡಿದಾಗ ಚಿಕ್ಕೋಡಿ ಸದಲಗಾದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ಮೂಡಿದೆ. ರಮೇಶ ಕತ್ತಿ ಅವರು ಸಹಕಾರ ಕ್ಷೇತ್ರದಲ್ಲಿ ರಾಜಕೀಯ ರಂಗದಲ್ಲಿ ಮತ್ತು ತನ್ನದೇ ಆದ ವ್ಯಕ್ತಿತ್ವವನ್ನು ಈ ಭಾಗದಲ್ಲಿ, ನಮ್ಮ ಜಿಲ್ಲೆಯಲ್ಲಿ ಬೆಳೆಸಿಕೊಂಡಿದ್ದಾರೆ. ಇವತ್ತು ಚಿಕ್ಕೋಡಿ ಭಾಗದಲ್ಲಿ ಪ್ರಭಾಕರ ಕೋರೆ ಅಣ್ಣಾ, ಮಹಾಂತೇಶ ಕವಟಗಿಮಠ, ಅಣ್ಣಾಸಾಹೇಬ ಜೊಲ್ಲೆ ಇರಬಹುದು ಎಲ್ಲರೂ ಕೂಡ ಟೀಮ್ ವರ್ಕ ಮಾಡುತ್ತಿದ್ದು, ಕೆಲವೇ ದಿನಗಳಲ್ಲಿ ವಿಜಯೋತ್ಸವ ಕಾಣುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂಓದಿ:'ನಾಗಲೋಕಕ್ಕೆ ಗುಳ್ಳೆನರಿ ಹೋಲಿಕೆ ಸಾಧ್ಯವೇ?': ಶರತ್ ಬಚ್ಚೇಗೌಡಗೆ ಎಂಟಿಬಿ ಟಾಂಗ್