ಬೆಳಗಾವಿ: ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಖಂಡಿಸಿ ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಭವನದಿಂದ ಆರಂಭವಾದ ಮೆರವಣಿಗೆ ಬಿಜೆಪಿ ನಾಯಕರು ತಂಗಿದ್ದ ಬೆಳಗಾವಿಯ ಖಾಸಗಿ ಹೋಟೆಲ್‌ವರೆಗೆ ನಡೆಯಿತು.
ಈ ಹೋಟೆಲ್ನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪದಾಧಿಕಾರಿಗಳ ಸಭೆ ನಡೆಯುತ್ತಿತ್ತು. ಇದೇ ವೇಳೆ ಕಮಲ ನಾಯಕರ ಮುತ್ತಿಗೆಗೆ ಕಾಂಗ್ರೆಸ್ ಕಾರ್ಯಕರ್ತರು ಮುಂದಾದರು. ಇದಕ್ಕೆ ಪೊಲೀಸರು ಆಸ್ಪದ ನೀಡಲಿಲ್ಲ. ಇದಕ್ಕೆ ಆಕ್ರೋಶಗೊಂಡ ಶಾಸಕಿ ಹೆಬ್ಬಾಳ್ಕರ್ ಕೊಲೆಗಡುಕ ಈಶ್ವರಪ್ಪ, ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಈ ವೇಳೆ ಪ್ರತಿಭಟನಾನಿರತರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ಇದರಿಂದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಪೊಲೀಸ್ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಯೂ ಕಾಂಟ್ ಟಚ್ ಮಿ: ಖಾಸಗಿ ಹೋಟೆಲ್ ಗೇಟ್ ಎದುರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಚನ್ನರಾಜ ಹಟ್ಟಿಹೊಳಿ ಧರಣಿ ಕುಳಿತಿದ್ದರು. ಈ ವೇಳೆ ಪೊಲೀಸರು ಹರಸಾಹಸಪಟ್ಟು ಹೆಬ್ಬಾಳ್ಕರ್, ಚನ್ನರಾಜ ಹಟ್ಟಿಹೊಳಿ ಅವರನ್ನು ವಶಕ್ಕೆ ಪಡೆದರು. ಈ ವೇಳೆ ನಾನು ಎಂಎಲ್‌ಸಿ ಇದ್ದೇನೆ. ಯೂ ಕಾಂಟ್ ಟಚ್ ಮಿ ಎಂದು ಚನ್ನರಾಜ್ ಅವಾಜ್ ಹಾಕಿದರು.
ಇದನ್ನೂ ಓದಿ: ಅಂಬೇಡ್ಕರ್ ವೈದ್ಯಕೀಯ ಕಾಲೇಜು ಸಂಸ್ಥಾಪಕ ಟ್ರಸ್ಟಿ ಕೊಲೆ ಯತ್ನ; ತನಿಖೆ ತೀವ್ರ