ಬೆಳಗಾವಿ: ಗೋಕಾಕ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ನಂತ್ರ ಪರಸ್ಪರ ದೂರವಾಗಿದ್ದ ಜಾರಕಿಹೊಳಿ ಸಹೋದರರು ಇಂದು ಜೊತೆಯಲ್ಲಿಯೇ ಕುಳಿತು ಹರಟಿರುವ ಬೆಳವಣಿಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಸಚಿವ ರಮೇಶ್ ಜಾರಕಿಹೊಳಿ ಮನೆಗೆ ಕಾಲಿಡಲ್ಲ ಎಂದಿದ್ದ ಲಖನ್ ಜಾರಕಿಹೊಳಿ ಇಂದು ಅವರ ಪಕ್ಕವೇ ಕುಳಿತು ಕುಶಲೋಪರಿ ವಿಚಾರಿಸಿದರು. ಬೆಂಗಳೂರಿನಲ್ಲಿ ರಮೇಶ್ ಜಾರಕಿಹೊಳಿಯವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ಲಖನ್ ಕೂಡ ಹಾಜರಾಗಿ ನೆರೆದಿದ್ದವರ ಹುಬ್ಬೇರಿಸಿದರು.
ಗೋಕಾಕ್ ನಗರದಲ್ಲಿರುವ ಲಖನ್ ಮನೆಗೆ ಎರಡು ದಿನಗಳ ಹಿಂದಷ್ಟೇ ಭೇಟಿ ನೀಡಿದ್ದ ರಮೇಶ್ ಜಾರಕಿಹೊಳಿ, ಗೃಹ ಪ್ರವೇಶಕ್ಕೆ ಆಹ್ವಾನಿಸಿದ್ದರು.
ವಿಧಾನಸಭೆ ಉಪಚುನಾವಣೆ ಬಳಿಕ ಇಬ್ಬರು ಸಹೋದರರ ಮೊದಲ ಭೇಟಿ ಇದಾಗಿದೆ. ಉಪಚುನಾವಣೆಗೂ ಮುನ್ನ ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಾ ಹಾವು ಮುಂಗುಸಿಯಂತೆ ಕಂಡುಬಂದಿದ್ದರು. ರಮೇಶ್ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಿದ್ದಂತೆ ಇಬ್ಬರೂ ಒಂದಾಗಿದ್ದಾರಾ? ಎನ್ನುವ ಅನುಮಾನ ಈಗ ಮೂಡುತ್ತಿದೆ.