ಚಿಕ್ಕೋಡಿ(ಬೆಳಗಾವಿ): ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಿ ಸರ್ಕಾರ ರಚನೆಯಾದರೆ ಕ್ರಿಕೆಟ್ ಬೆಟ್ಟಿಂಗ್, ರಮ್ಮಿಯನ್ನು ರದ್ದು ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರದೀಪ್ ಮಾಳಿಗೆ ಹಾಗೂ ಕುಡಚಿ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಆನಂದ್ ಮಾಳಗಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿಗೆ ಹಾಗೂ ದೇಶಕ್ಕೆ ಮಾರಕವಾಗಿರುವ ಹಲವು ಜೂಜಾಟಗಳಿಗೆ ನಿಷೇಧ ಕಾಯ್ದೆ ಜಾರಿ ಮಾಡಲಾಗುವುದು. ಅದರಲ್ಲೂ ಕ್ರಿಕೆಟ್ ಬೆಟ್ಟಿಂಗ್, ಮೊಬೈಲಿನಲ್ಲಿ ಬರುತ್ತಿರುವ ರಮ್ಮಿ ಬೆಟ್ಟಿಂಗ್ಗಳನ್ನು ರದ್ದು ಮಾಡಲಾಗುವುದು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ. ಇನ್ನೂ ರಾಜ್ಯದಲ್ಲಿ ಬಡತನ ಹೋಗಿಲ್ಲ, 6650 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳ್ಳೆಯ ಶಿಕ್ಷಣ ನೀಡಲಾಗುವುದು. ಶ್ರೀಮಂತರಿಗೆ ಸರಿಸಾಟಿ ಹೊಂದುವಂತೆ ಬಡವರಿಗಾಗಿ ಪಂಚರತ್ನ ಯೋಜನೆ ರೂಪಿಸಲಾಗಿದೆ ಎಂದರು.
ಪಂಚರತ್ನ ಯೋಜನೆಗಳಲ್ಲಿ ರೈತರಿಗಾಗಿ ಯೋಜನೆಗಳನ್ನು ರೂಪಿಸಲಾಗಿದೆ. ಆರೋಗ್ಯ ವಿಚಾರದಲ್ಲಿ ನಾವು ಹೆಚ್ಚಿನ ಆದ್ಯತೆ ನೀಡಲಾಗಿದೆ. ಯಾವುದೇ ಕಾಯಿಲೆ ಬರಲಿ ಎಲ್ಲದಕ್ಕೂ ಸರ್ಕಾರ ಹಣವನ್ನು ಬರಿಸುತ್ತದೆ. ರೈತರಿಗೆ ಬಿತ್ತನೆ, ಗೊಬ್ಬರವನ್ನು ತೆಗೆದುಕೊಳ್ಳುವುದಕ್ಕೆ ಹತ್ತು ಸಾವಿರ ನೀಡಲಾಗುವುದು. ಭೂಮಿ ಇಲ್ಲದೆ ಇರುವ ಕೂಲಿ ಕಾರ್ಮಿಕರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡಲಾಗುವುದು. ಪ್ರವಾಹ ಪೀಡಿತ ಜನರಿಗೆ ವಸತಿ ನೀಡಲಾಗುವುದು, ಗ್ರಾಮೀಣ ಭಾಗದಲ್ಲಿ ವಸತಿ ಯೋಜನೆ ನೀಡಲಾಗುವುದು 2006ರಲ್ಲಿ ಸಿಎಂ ಆದಾಗ ರೈತರ ಸಾಲ ಮನ್ನಾ ಮಾಡಿದ್ದೆ. ಇದರಿಂದ ರಾಯಬಾಗ ತಾಲೂಕಿನ 24 ಸಾವಿರ ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಕಬ್ಬು ಮಾರಾಟ ಮಾಡಲು ಸಾಧ್ಯವಾಗದ ರೈತರ ಕಷ್ಟವನ್ನು ನೋಡಿ 25 ಸಾವಿರ ಸಹಾಯಧನವನ್ನು ರೈತರಿಗೆ ಕೊಟ್ಟೆ. ರಾಜ್ಯದಲ್ಲಿ ಲಾಟ್ರಿ ಮತ್ತು ಸಾರಾಯಿಯನ್ನು ನಿಷೇಧ ಮಾಡಿದೆ. ಇವತ್ತು ಯುವಕರು ಮೊಬೈಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಅದರಿಂದ ಹಳ್ಳಿಗಳಲ್ಲಿ ಯುವಕರು ಲಕ್ಷಾಂತರ ರೂಪಾಯಿ ಸಾಲ ಮಾಡುತ್ತಿದ್ದಾರೆ. ಈ ಸಾಲ ತೀರಿಸಲು ಅವರ ತಂದೆ - ತಾಯಿ ಕಷ್ಟಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ರು.
ಜೆಡಿಎಸ್ ಸರ್ಕಾರ ರಚನೆಯಾದ ಒಂದೇ ತಿಂಗಳಲ್ಲಿ ರಾಯಬಾಗ ಭಾಗಕ್ಕೆ ನೀರಾವರಿ ಯೋಜನೆ ರೂಪಿಸಲಾಗುವುದು, ಕರಗಾಂವ್ ಹನುಮಾನ್ ಏತ ನೀರಾವರಿ ಯೋಜನೆ ರೂಪಿಸಲಾಗುವುದು. ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ರಾಯಬಾಗ ಕುಡಚಿ ವಿಧಾನಸಭಾ ಕ್ಷೇತ್ರಗಳನ್ನು ನಾನು ದತ್ತು ತೆಗೆಕೊಳುತ್ತೆನೆ ಅಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು. ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಹಳ್ಳಿಗಳ ವ್ಯವಸ್ಥೆ ನೋಡಲಾಗಿದೆ. ನಮ್ಮ ಸರ್ಕಾರ ಗ್ರಾಮೀಣ ಬಾಗದ ಜನರಿಗೆ ನೇರವಾಗಿ ಯೋಜನೆ ರೂಪಿಸಲಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಹೋದ ಮೇಲೆ ಹಲವು ಯೋಜನೆಗಳನ್ನು ಈ ಸರ್ಕಾರಗಳು ನಿಲ್ಲಿಸಿದೆ ಎಂದು ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ನೀವು ಹೆಚ್ಚಿನ ಮತ ನೀಡಿ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಸಲ್ಲಿಸಿದರು.
ಇದನ್ನೂ ಓದಿ:ನನ್ನ ಎಡಗಾಲಿನ ಚಪ್ಪಲಿ ಖರೀದಿ ಮಾಡಲು ಸಹ ಸಾಧ್ಯವಿಲ್ಲ : ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡ ಕೆಂಡಾಮಂಡಲ