ಬೆಳಗಾವಿ: ಸಿಡಿ ಪ್ರಕರಣದಲ್ಲಿ ಕಳೆದ 20 ದಿನಗಳಿಂದ ದಿನಕ್ಕೊಂದು ಹೇಳಿಕೆಗಳು ಬರುತ್ತಿವೆ. ಹೀಗಾಗಿ ಯುವತಿ ಹೇಳಿಕೆ ಹಾಗೂ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸುವ ಚಾರ್ಜ್ಶೀಟ್ ಮುಖ್ಯವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸಿಡಿ ಕೇಸ್ನಲ್ಲಿ ಯುವತಿ ಹೇಳಿಕೆ ಮುಖ್ಯ. ಯುವತಿ ಪ್ರಕರಣದ ಆಧಾರಸ್ತಂಭ. ಅವಳು ಪೊಲೀಸರಿಗೆ ಹೇಳಿಕೆ ನೀಡುವವರೆಗೂ ಯಾವುದೇ ಸ್ಪಷ್ಟತೆ ಸಿಗುವುದಿಲ್ಲ. ದಿನಕ್ಕೊಂದು ಹೇಳಿಕೆ, ಮಾಹಿತಿಗಳು ಹೊರಬರುತ್ತಿವೆ. ಪೊಲೀಸರು ಅದನ್ನು ಸಮರ್ಥವಾಗಿ ತನಿಖೆ ನಡೆಸಬೇಕು. ಆದಷ್ಟು ಬೇಗ ಈ ಪ್ರಕರಣ ಇತ್ಯರ್ಥವಾಗಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಪೊಲೀಸರಿಗೆ ಯುವತಿಯನ್ನು ಪತ್ತೆ ಹಚ್ಚಲು ಆಗದಿರುವುದು ನಾಚಿಕೆಗೇಡಿನ ಸಂಗತಿ: ಸಿದ್ದರಾಮಯ್ಯ
ಸಿಡಿ ಪ್ರಕರಣದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ. ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್, ಡಬಲ್, ತ್ರಿಬಲ್ ಟ್ವಿಸ್ಟ್ಗಳು ಬರುತ್ತಿವೆ. ಇದರಿಂದ ರಾಜ್ಯದ ಜನರು ಗೊಂದಲಕ್ಕೊಳಗಾಗುತ್ತಿದ್ದಾರೆ. ಯುವತಿಯನ್ನು ಹಿಡಿದುಕೊಂಡು ಬರಬೇಕು. ಅವಳ ಹೇಳಿಕೆ ದಾಖಲಿಸಬೇಕು. ರಾಜ್ಯದ ಜನತೆಗೆ ಸ್ಪಷ್ಟವಾಗಿ ಸತ್ಯಾಂಶ ತಿಳಿಸಬೇಕು ಎಂದು ಹೇಳಿದರು.
ನಾಳೆ ನಾಮಪತ್ರ ಸಲ್ಲಿಕೆ: ನಾಳೆ ಬೆಳಗ್ಗೆ ಗಂಟೆಗೆ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಲ್ಯಾಣ ಕರ್ನಾಟಕ ಭಾಗದ ನಾಯಕರು ಆಗಮಿಸಲಿದ್ದಾರೆ. ಚುನಾವಣೆಯಲ್ಲಿ ಗೆಲ್ಲುತ್ತೇವೆ. ಎಷ್ಟು ಅಂತರದಿಂದ ಗೆಲ್ಲುತ್ತೇನೆ ಎಂಬುದರ ಬಗ್ಗೆ ಜನರು ತೀರ್ಮಾನ ಮಾಡಲಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಬಂದರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ನಡೆಸಲಿದ್ದಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅದು ಆ ಪಕ್ಷಕ್ಕೆ ಬಿಟ್ಟ ವಿಚಾರವಾಗಿದ್ದು, ನಾಳಿನ ನಾಮಪತ್ರ ಸಲ್ಲಿಕೆಗೆ ಡಿಕೆಶಿ ಬರಲಿದ್ದಾರೆ. ಇಂದು ಸಂಜೆ ಡಿಕೆಶಿ ಜೊತೆಗೆ ಚುನಾವಣಾ ಬಗ್ಗೆ ಸಭೆ ನಡೆಯಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು.