ಬೆಳಗಾವಿ: 200 ರೂ. ಬಾಂಡ್ ಮೇಲೆ ಖರೀದಿ ಮಾಡಿ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸುವುದು 20 ವರ್ಷಗಳ ಹಳೆಯ ಸಮಸ್ಯೆಯಾಗಿದೆ. ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಅದನ್ನು ಈಗ ಮತ್ತೆ ಪ್ರಸ್ತಾಪಿಸುತ್ತಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ದರು? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಡ್ಗಳ ಮೇಲೆ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸುವುದು ಹೇಳಿದಷ್ಟು ಸುಲಭವಲ್ಲ. ಮನೆಗಳ ಸಕ್ರಮವನ್ನು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು. ಇದಕ್ಕೆ ವಿವಿಧ ಇಲಾಖೆಗಳ ಸಹಮತ ಬೇಕು ಎಂದರು.
ಚುನಾವಣೆ ಮುಗಿದ ಮೇಲೆ ಜನರು ಈ ಬಗ್ಗೆ ಯಾರನ್ನು ಕೇಳುವುದು. ಮುಖ್ಯಮಂತ್ರಿಗಳ ಮಟ್ಟದಲ್ಲಿ ಇದು ಚರ್ಚೆಯಾಗಬೇಕು. ಚುನಾವಣೆಗೂ ಮೊದಲೇ ರಾಜ್ಯ ಸರ್ಕಾರವೇ ಮನೆಗಳನ್ನು ಸಕ್ರಮಗೊಳಿಸುವ ಕುರಿತು ಅಧಿಕೃತವಾಗಿ ಘೋಷಿಸಲಿ ಎಂದು ಸವಾಲೆಸೆದರು.
ಯೋಜನೆಗಳ ಹೆಸರು ಬದಲಾಯಿಸುವುದು ಬಿಜೆಪಿಯವರ ಹವ್ಯಾಸ:
ಬೇರೆಯವರ ಯೋಜನೆಗಳ ಹೆಸರು ಬದಲಾಯಿಸುವುದು ಬಿಜೆಪಿಯವರ ಹವ್ಯಾಸವಾಗಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೂ ಯುಪಿಎ ಯೋಜನೆಗಳ ಹೆಸರು ಬದಲಾಯಿಸಿ, ಅವುಗಳನ್ನು ಮುಂದುವರೆಸಿಕೊಂಡು ಬರುತ್ತಿದೆ ಎಂದರು.
ಪಾಲಿಕೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ 24x7 ಕುಡಿಯುವ ನೀರಿನ ಯೋಜನೆ, ಕಸ ಸಂಗ್ರಹಣೆ,ಉಚಿತ ಶವಸಂಸ್ಕಾರ ರಾಜ್ಯ ಸರ್ಕಾರದ ಹಳೆಯ ಯೋಜನೆಗಳಾಗಿವೆ. ಇವರು ಹೊಸದೇನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಜನತಾಪರಿವಾರದ ಬೇರು ಆಳವಾಗಿ ಬೇರೂರಲು ರಾಮಕೃಷ್ಣ ಹೆಗಡೆ ಕಾರಣ: ಸಿಎಂ ಬೊಮ್ಮಾಯಿ