ಬೆಳಗಾವಿ: ಕಿತ್ತೂರು ಅರಮನೆ ಹಾಗೂ ಕೋಟೆ ಅಭಿವೃದ್ಧಿಯನ್ನು ಅಕ್ಟೋಬರ್ 2024ರ ಕಾಲಮಿತಿಯೊಳಗೆ ಮುಗಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಿತ್ತೂರ ಐತಿಹಾಸಿಕ ವಿಜಯಕ್ಕೆ 200 ವರ್ಷ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇಂದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಸೇನೆ ಮೊದಲ ಗೆಲುವು ಸಾಧಿಸಿದ್ದ ಐತಿಹಾಸಿಕ ವಿಜಯಕ್ಕೆ ಅಕ್ಟೋಬರ್‌ಗೆ 200 ವರ್ಷವಾಗಲಿದೆ. ಇದು ಇಡೀ ನಾಡಿನ ಹೆಮ್ಮೆಯ ವಿಚಾರಗಳಲ್ಲೊಂದು. ಈ ನಿಟ್ಟಿನಲ್ಲಿ ಸರ್ಕಾರ ಐತಿಹಾಸಿಕ ಕಾರ್ಯಕ್ರಮ ಯೋಜಿಸುವ ಆಲೋಚನೆಯಲ್ಲಿದೆ. ಅಷ್ಟರೊಳಗೆ ಕಿತ್ತೂರು ಕೋಟೆ ಹಾಗೂ ಅರಮನೆ ಹಾಗೂ ರಾಣಿ ಚೆನ್ನಮ್ಮನ ಸಮಾಧಿ ಸ್ಥಳ ಸಂಪೂರ್ಣ ಅಭಿವೃದ್ಧಿಯಾಗಬೇಕು. ಅಲ್ಲದೇ ಈ ಸ್ಥಳಗಳು ಪ್ರವಾಸಿ ತಾಣವಾಗಿಯೂ ಜನರನ್ನು ಸೆಳೆಯುವಂತಿರಬೇಕು ಎಂದರು.
ಕೋಟೆ ಹಾಗೂ ಅರಮನೆಯನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ. ನಮ್ಮ ಶ್ರೀಮಂತ ಇತಿಹಾಸ ಹಾಗೂ ಪರಂಪರೆಯ ಕುರುಹುಗಳನ್ನು ಉಳಿಸುವುದು ಮತ್ತು ಮುಂದಿನ ಪೀಳಿಗೆಗೆ ಇತಿಹಾಸದ ಅರಿವು ಮೂಡಿಸುವುದು ನಮ್ಮ ಮೇಲಿರುವ ಮಹತ್ತರ ಜವಾಬ್ದಾರಿ. ಹೀಗಾಗಿ ಮುಂದಿನ 200 ವರ್ಷಗಳನ್ನು ಗಮನದಲ್ಲಿಟ್ಟು ಮುಂದಾಲೋಚನೆಯೊಂದಿಗೆ ಈ ಐತಿಹಾಸಿಕ ತಾಣಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.
ಅಭಿವೃದ್ಧಿ ವಿಚಾರದಲ್ಲಿ ಪ್ರಾಚೀನತೆ ಅಂಶಗಳನ್ನೂ ಒಳಗೊಂಡಿರಬೇಕು. ಯಾವುದೇ ಒತ್ತಡಕ್ಕೆ ಒಳಗಾಗದೇ ಐತಿಹಾಸಿಕ ಅಂಶಗಳು ಮರೆಯಾಗದಂತೆ ಅಚ್ಚುಕಟ್ಟಾಗಿ ಬಿಂಬಿಸಬೇಕು. ನೋಡುಗರಿಗೆ ಇದು ನಮ್ಮದೇ ಇತಿಹಾಸ ಎಂದು ಸೆಳೆಯುವಂತಿರಬೇಕು. ಈ ನಿಟ್ಟಿನಲ್ಲಿ ಪ್ರಾಧಿಕಾರ ಅಧಿಕಾರಿಗಳು ಪುರಾತತ್ವ ಇಲಾಖೆಯ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳಬೇಕು. ಅವರ ಮೇಲ್ವಿಚಾರಣೆಯಲ್ಲಿ ಎಲ್ಲಾ ಕೆಲಸಗಳೂ ಸುಗಮವಾಗಿ ನಡೆಯಬೇಕು ಎಂದು ಸಚಿವರು ಹೇಳಿದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ವೆಚ್ಚ ಬಜೆಟ್ದಲ್ಲಿ ಸೇರ್ಪಡೆ: ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಖಾತೆಯಲ್ಲಿ ಈಗಾಗಲೇ 14.5 ಕೋಟಿ ಹಣ ಇದೆ. ಮುಂದಿನ ವರ್ಷದ ಅನುದಾನವೂ ಸೇರಿ ಕನಿಷ್ಠ 20 ಕೋಟಿ ರೂ. ಪ್ರಾಧಿಕಾರಕ್ಕೆ ಸಿಗಲಿದೆ. ಅಲ್ಲದೇ ವಿಶೇಷ ಪ್ಯಾಕೇಜ್ ನೀಡಲು ಕೋಟೆ-ಅರಮನೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದ ವೆಚ್ಚವನ್ನು ಬಜೆಟ್‌ನಲ್ಲಿ ಸೇರಿಸಲೂ ಸಹ ಸರ್ಕಾರ ಸಿದ್ದವಾಗಿದೆ ಎಂದು ಸಭೆಯಲ್ಲಿ ಭರವಸೆ ನೀಡಿದರು.
ಇದನ್ನೂಓದಿ: ಎನ್ಇಪಿ ಚರ್ಚೆಯಲ್ಲಿ ಪ್ರಧಾನಿ ಶಿಕ್ಷಣದ ಪ್ರಸ್ತಾಪದಿಂದ ಗದ್ದಲ: ಪರಿಷತ್ ಕಲಾಪ ಮುಂದೂಡಿಕೆ