ಬೆಳಗಾವಿ : ರಾಣಿ ಚೆನ್ನಮ್ಮ ನಮ್ಮ ನಾಡಿನ ಶೌರ್ಯದ ಪ್ರತೀಕ. ಈ ನಾಡಿನ ಉದ್ಧಾರಕ್ಕಾಗಿ ಹೋರಾಡಿದ ಮಹನೀಯರನ್ನು ಜಾತಿಗೆ ಸೀಮಿತಗೊಳಿಸಬೇಡಿ. ಹಾಗೆ ಮಾಡಿದ್ರೆ ಅವರಿಗೆ ಮಾಡುವ ದೊಡ್ಡ ಅವಮಾನ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ಅಭಿಪ್ರಾಯಟ್ಟರು.
ಕಿತ್ತೂರು ತಾಲೂಕಿನ ಕೋಟೆ ಆವರಣದಲ್ಲಿ 3 ದಿನಗಳ ಕಾಲ ನಡೆಯುತ್ತಿರುವ ಐತಿಹಾಸಿಕ ಕಿತ್ತೂರು ಉತ್ಸವ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದ್ರು.
ಭಾರತದ ಸ್ವಾತಂತ್ರ್ಯ ಇತಿಹಾಸ ಶೌರ್ಯ ಮತ್ತು ಸಾಹಸದಿಂದ ಕೂಡಿದ ಯಶೋಗಾಥೆಯಾಗಿದೆ. ನಮ್ಮನ್ನಾಳಿದ ಬ್ರಿಟಿಷರು, ಮೊಗಲರು ತಮ್ಮ ಸಾಮರ್ಥ್ಯದಿಂದ ಆಳಲಿಲ್ಲ. ನಮ್ಮ ಒಡಕಿನ ಲಾಭ ಪಡೆದು ನಮ್ಮನ್ನು ಆಳಿದ್ದಾರೆ. ಇತಿಹಾಸದ ಈ ಪಾಠ ನಮಗೆ ಭವಿಷ್ಯದಲ್ಲಿ ಮಾರ್ಗದರ್ಶನವಾಗಲಿ ಎಂದು ಹೇಳಿದ್ರು.
ಸಮಾನತೆಯ ಸಾರ ನಮ್ಮ ದೇಶದ್ದಾಗಿದೆ. ಇಂದು ನಾವು ಜಾತಿ, ಅಸ್ಪೃಶ್ಯತೆ ಮೀರಿ ಯೋಚಿಸದಿದ್ದರೆ ದೇಶವನ್ನು ಉಳಿಸುವುದು ಕಷ್ಟವಾದೀತು. ಕಿತ್ತೂರು ನಮ್ಮದು ಎಂಬ ಅಭಿಮಾನ ಸ್ಥಳೀಯರು ಬೆಳೆಸಿಕೊಳ್ಳದಿದ್ದರೆ, ಅಭಿವೃದ್ಧಿ ಎಂಬುದು 3 ದಿನಗಳ ಮಾತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕಿತ್ತೂರು ಕೋಟೆ, ಪರಂಪರೆ ರಕ್ಷಣೆಗೆ ಕೈಜೋಡಿಸಬೇಕು ಎಂದು ಸಚಿವ ಸಿ.ಟಿ.ರವಿ ಕರೆ ನೀಡಿದ್ದಾರೆ.