ಚಿಕ್ಕೋಡಿ/ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಕರೆಪ್ಪ ಸದಾಶಿವ ದಾಂಡಗೆ ಎಂಬ ಯುವಕ ಕಳೆದ ಒಂದು ವರ್ಷದಿಂದ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ಈತ ತನ್ನ ಚಿಕಿತ್ಸಾ ವೆಚ್ಚಕ್ಕಾಗಿ ದಾನಿಗಳ ಸಹಾಯ ಬೇಡುತ್ತಿದ್ದಾನೆ.
ಕರೆಪ್ಪ ತಂದೆ, ತಾಯಿ, ಅಣ್ಣನೊಂದಿಗೆ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದ, ಕಳೆದ ಒಂದು ವರ್ಷದ ಹಿಂದೆ ದಿಢೀರ್ ಅನಾರೋಗ್ಯ ಕಾಡಲಾರಂಭಿಸಿತು. ತಪಾಸಣೆ ಮಾಡಿಸಿದಾಗ ಎರಡೂ ಕಿಡ್ನಿ ವೈಫಲ್ಯಗೊಂಡಿರುವುದು ತಿಳಿದು ಬಂತು. ಇದರಿಂದ ಕಂಗಾಲಾದ ಈ ಬಡ ಕುಟುಂಬ ಮಗನ ಚಿಕಿತ್ಸಾ ವೆಚ್ಚಕ್ಕಾಗಿ ಈಗಾಗಲೇ 20 ಲಕ್ಷ ರೂಪಾಯಿಗಿಂತ ಅಧಿಕ ಹಣ ಖರ್ಚು ಮಾಡಿದೆ.
ಪ್ರತಿ ವಾರ ಡಯಾಲಿಸಿಸ್ ಹಾಗೂ ಇನ್ನಿತರ ಚಿಕಿತ್ಸಾ ವೆಚ್ಚಕ್ಕಾಗಿ ಕನಿಷ್ಠ 5 ಸಾವಿರ ರೂಪಾಯಿ ಖರ್ಚಾಗುತ್ತಿದೆ. ವಾರದ ಚಿಕಿತ್ಸಾ ವೆಚ್ಚ ಭರಿಸುವುದಕ್ಕಾಗಿ ಮನೆಯಲ್ಲಿದ್ದ ಸಾಕು ಪ್ರಾಣಿಗಳನ್ನು ಮಾರಿ, ನಂತರ ತಾಯಿ ಕೆಂಚವ್ವ ಸದಾಶಿವ ದಾಂಡಗೆ ತಾಳಿ ಮಾರಿ ಚಿಕಿತ್ಸೆ ಕೊಡಿಸಿದ್ದಾರೆ.
ಮುಂದಿನ ಹಂತದ ಚಿಕಿತ್ಸಾ ವೆಚ್ಚ ಹಾಗೂ ಕುಟುಂಬ ನಿರ್ವಹಣೆಗಾಗಿ ಇವರು ದಾನಿಗಳ ನೆರವಿಗಾಗಿ ಕಾಯುತ್ತಿದ್ದಾರೆ. ತಂದೆ-ತಾಯಿ, ಸಹೋದರ ಹೊಲಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಇತ್ತ ಸರ್ಕಾರಿ ಆಸ್ಪತ್ರೆಗೆ ಹೋಗಬೇಕೆಂದರೆ ಕೊರೊನಾ ರೋಗಿಗಳ ಚಿಕಿತ್ಸೆ ಪ್ರಾರಂಭಿಸಿರುವ ಹಿನ್ನೆಲೆ ನನ್ನ ಮಗನಿಗೆ ಚಿಕಿತ್ಸೆ ನೀಡುತ್ತಿಲ್ಲ. ದಯವಿಟ್ಟು ದಾನಿಗಳು ಸಹಾಯ ಮಾಡಬೇಕು ಎಂದು ಈ ಕುಟುಂಬ ಅಂಗಲಾಚುತ್ತಿದೆ.
ದಾನಿಗಳು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲು ಕೋರಿದ್ದಾರೆ. ಬ್ಯಾಂಕ್ ಖಾತೆ ಸಂಖ್ಯೆ : 17215701260 ಐಎಫ್‌ಎಸ್‌ಸಿ ಕೋಡ್ - KVGB0002711. ಯುವಕನನ್ನು ಭೇಟಿಯಾಗಲು 7259669168 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.