ಬೆಳಗಾವಿ: ದೆಹಲಿಯಿಂದ ಬಂದ ಕೆಲವರು ಎರಡೂವರೆ ಸಾವಿರ ಕೋಟಿ ನೀಡಿ, ನಿಮ್ಮನ್ನು ಸಿಎಂ ಮಾಡ್ತೀವಿ ಎಂದು ಹೇಳಿದ್ರು. ರಾಜಕಾರಣದಲ್ಲಿ ಯಾರೂ ಅಲ್ಲಿಲ್ಲಿ ಹೋಗಿ ಹಾಳಾಗಬೇಡಿ. ನಿಮಗೆ ಟಿಕೆಟ್ ಕೊಡಿಸುತ್ತೇವೆ, ದೆಹಲಿಗೆ ಕರೆದುಕೊಂಡು ಹೋಗುತ್ತೇವೆ. ಸೋನಿಯಾ ಗಾಂಧಿ ಭೇಟಿ ಮಾಡಿಸ್ತೀವಿ, ಜೆ.ಪಿ.ನಡ್ಡಾರನ್ನು ಭೇಟಿ ಮಾಡಿಸ್ತೀವಿ ಅಂತಾ ಹೇಳಿ ಬರ್ತಾರೆ. ಹಾಗೆ ನನ್ನ ಹತ್ತಿರವೂ ದೆಹಲಿಯಿಂದ ಒಂದಿಷ್ಟು ಜನ ಬಂದಿದ್ದರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
'ರಾಜಕಾರಣದಲ್ಲಿ ಮೋಸ ಮಾಡ್ತಾರೆ': ರಾಮದುರ್ಗದಲ್ಲಿ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು, ನಿಮ್ಮನ್ನು ಸಿಎಂ ಮಾಡ್ತೀವಿ 2,500 ಕೋಟಿ ಸಜ್ಜು ಮಾಡಿ ಇಡ್ರಿ ಅಂತಾ ಹೇಳಿದ್ದರು. ಆದ್ರೆ 2,500 ಕೋಟಿ ಅಂದ್ರೆ ಏನ್ ಅಂತಾ ತಿಳಿದಿರಿ. ಆ ಎರಡೂವರೆ ಸಾವಿರ ಕೋಟಿ ಹೆಂಗ್ ಇಡೋದು. ಏನು ಕೋಣೆಯಲ್ಲಿ ಇಡೋದೋ? ಗೋದಾಮಿನಲ್ಲಿ ಇಡೋದೋ? ಹಂಗ ಟಿಕೆಟ್ ಕೊಡ್ತೀನಿ ಅಂತಾ ರಾಜಕಾರಣದಲ್ಲಿ ಎಲ್ಲಾ ಕಡೆ ಮೋಸ ಮಾಡ್ತಾರೆ. ಎಚ್ಚರಿಕೆಯಿಂದ ಇರಬೇಕು ಎಂದರು.
ವಿಜಯಪುರ ಹೆಚ್ಚು ಕಡಿಮೆ ಪಾಕಿಸ್ತಾನ ಇದ್ದಂಗಿದೆ: ವಿಜಯಪುರ ಹೆಚ್ಚು ಕಡಿಮೆ ಪಾಕಿಸ್ತಾನ ರೀತಿ ಐತಿ ಅಂತಹ ಮತಕ್ಷೇತ್ರದಲ್ಲಿ ನಾನು ಆರಿಸಿ ಬಂದಿದ್ದೇನೆ. ಏಕೆಂದರೆ ಅವರದ್ದು ಒಂದು ಲಕ್ಷ ವೋಟ್ ಇದ್ರೆ, ನಮ್ದು ಒಂದೂವರೆ ಲಕ್ಷ ವೋಟ್ಗಳಿವೆ. ನಮ್ಮ ಮಂದಿ ವಿಜಯಪುರದಲ್ಲಿ ಹೊರಗೆ ಬರ್ತಿರಲಿಲ್ಲ. ಹೊರಗೆ ಬರದಿದ್ರೆ ಪಾಕಿಸ್ತಾನ ಆಗ್ತೈತಿ ನೋಡಿ ಅಂತಾ ಹೇಳಿದ್ದೆ. ಹೀಗಾಗಿ ಹೊರಗೆ ಬಂದು ನನಗೆ ವೋಟ್ ಹಾಕಿ ಗೆಲ್ಲಿಸಿದ್ದಾರೆ ಎಂದು ಯತ್ನಾಳ್ ಹೇಳಿದರು.
ಬೆಲ್ಲದ್ನ ಮಂತ್ರಿ ಮಾಡಬಾರದೆಂದು ಮುನೇನಕೊಪ್ಪನ ಮಾಡಿದ್ರು: ಮೊದಲು ಯಡಿಯೂರಪ್ಪ ಪಂಚಮಸಾಲಿ ಸಮುದಾಯದ ಒಬ್ಬನನ್ನು ಮಂತ್ರಿ ಮಾಡಲು ಒದ್ದಾಡುತ್ತಿದ್ರು. ಆದರೀಗ ನಮ್ಮ ಹೊಡೆದಾಟದಿಂದ ಮೂರು ಜನ ಆಗಿದ್ದಾರೆ. ಬಸನಗೌಡನ ಮಂತ್ರಿ ಮಾಡಬಾರದು ಅಂತಾ ಸಿ.ಸಿ.ಪಾಟೀಲ್‌ನ ಮಂತ್ರಿ ಮಾಡಿದ್ರು. ಒಂದ್ ಕ್ಯಾಶ್ ಕ್ಯಾಂಡಿಡೇಟ್ ಐತಿ ಅದನ್ನು ಮಂತ್ರಿ ಮಾಡಲೇಬೇಕು ಅಂತಾ ಮುರುಗೇಶ್ ನಿರಾಣಿಗೆ ಪರೋಕ್ಷವಾಗಿ ಕ್ಯಾಶ್ ಕ್ಯಾಂಡಿಡೇಟ್ ಎಂದು ಯತ್ನಾಳ್ ಟಾಂಗ್ ಕೊಟ್ಟರು. ರಾಜ್ಯದಲ್ಲಿ ಅರವಿಂದ ಬೆಲ್ಲದ್ ಅವರನ್ನು ಮಂತ್ರಿ ಮಾಡಬಾರದು ಅಂತಾ ಜಗದೀಶ್ ಶೆಟ್ಟರ್ ಅವರು ಶಂಕರ್ ಪಾಟೀಲ್ ಮುನೇನಕೊಪ್ಪನ ಅವರನ್ನು ಮಂತ್ರಿ ಮಾಡಿದ್ದಾರೆ.
ಲಾಲಿಪಾಪ್ ಆಸೆ ಹಚ್ಚಬೇಡಿ: ನೀವು ಸಿಎಂ ಆಗಿರೋವರೆಗೂ ನಿಮ್ಮ ಛೇಂಬರ್‌ಗೆ ಬರಲ್ಲ ಎಂದು ಬಿಎಸ್‌ವೈಗೆ ಹೇಳಿದ್ದೆ. ನಿನ್ನ ಸಿಎಂ ಸ್ಥಾನದಿಂದ ಇಳಿಸಿಯೇ ಈ ಛೇಂಬರ್‌ಗೆ ಬರ್ತೀನಿ ಅಂತಾ ಹೇಳಿದ್ದೆ. ಇದಾದ ಬಳಿಕ ಸಿಎಂ ಬೊಮ್ಮಾಯಿ ಫೋನ್ ಮಾಡಿ ಕರೆಸಿದಾಗ ಹೋಗಿದ್ದೆ. ಆಗ ನಿಮ್ಮಿಂದ ನಾನು ಇವತ್ತು ಸಿಎಂ ಆಗಿದ್ದೇನೆ ಅಂತಾ ಹೇಳಿದ್ದರು. ಲಾಲಿಪಾಪ್ ಆಸೆಯನ್ನ ನನಗೆ ಹಚ್ಚಬೇಡಿ. ಹಿಂದಿನವರೂ ಮಾಡಿದ ಹಾಗೆ ನಾಟಕ ಮಾಡೋ ಮಗನಲ್ಲ. ಪಂಚಮಸಾಲಿ ಮೀಸಲಾತಿ ಕೊಡಿ ನಿಮ್ಮ ಮಂತ್ರಿ ಅಲ್ಲೇ ಇಟ್ಟುಕೊಳ್ಳಿ ಅಂತಾ ಹೇಳಿದ್ದೇನೆ ಎಂದರು.
ಬೊಮ್ಮಾಯಿ ಒಂದು ವಾರದಿಂದ ಟೆನ್ಷನ್‌ನಲ್ಲಿದ್ದಾರೆ: ಕಳೆದ ಒಂದು ವಾರದಿಂದ ಸಿಎಂ ಬಸವರಾಜ ಬೊಮ್ಮಾಯಿ ಟೆನ್ಷನ್‌ನಲ್ಲಿದ್ದಾರೆ. ಮೊನ್ನೆ ಅಮಿತ್ ಶಾ ಬಂದಾಗ ಏನ್ ಆಗಿಲ್ಲ. ಆದ್ರೆ, ಸಿಎಂಗೆ ಟೆನ್ಷನ್ ಆಗತೈತಿ. ಒಂದು ಅವರಿಗೆ ಟೆನ್ಶನ್ ಆಗದಿದ್ದರೂ ನಾವು ಟೆನ್ಷನ್ ಕೊಡುತ್ತೇವೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದಿದ್ರೆ, ನಾವು ಟೆನ್ಷನ್ ಕೊಡುತ್ತೇವೆ. ನೀವು ಎಷ್ಟು ದಿವಸದಾಗ ಮೀಸಲಾತಿ ಕೊಡ್ತೀರಿ ಅನ್ನೋದನ್ನು ಹೇಳಬೇಕು. ಇಲ್ಲ ಆಗೋದಿಲ್ಲ ಅಂತಾ ಕೈ ಎತ್ತಿಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ ಗರಂ ಆದರು.