ಬೆಳಗಾವಿ: ಜನರ ಅಹವಾಲುಗಳನ್ನು ಆಲಿಸುವುದರ ಜತೆಗೆ ಸರ್ಕಾರದ ಸಹಾಯ-ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆಶಯದೊಂದಿಗೆ ಆರಂಭಗೊಂಡಿರುವ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ' ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಕಂಡಿತು.
ಬೈಲಹೊಂಗಲ ತಾಲ್ಲೂಕಿನ ಬೈಲವಾಡ ಗ್ರಾಮದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಜನರು ಉತ್ಸಾಹದಿಂದ ಭಾಗವಹಿಸಿದರು. ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ಸುಮಾರು 2 ತಾಸುಗಳ ಕಾಲ ಗ್ರಾಮದ ಓಣಿ ಓಣಿಗೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಜನರ ಸಮಸ್ಯೆಗಳನ್ನು ಆಲಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಜನರಿಂದ ಲಿಖಿತ ಹಾಗೂ ಮೌಖಿಕ ಮನವಿಗಳನ್ನು ಪಡೆದು, ಕಾಲಮಿತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಮಾಶಾಸನ, ಬಸ್ ಸೌಕರ್ಯ, ವಿದ್ಯುಚ್ಛಕ್ತಿ ಸಮಸ್ಯೆ, ವಸತಿ ವಿಷಯಗಳು ಸೇರಿದಂತೆ 210 ಕ್ಕೂ ಅಧಿಕ ಅಹವಾಲುಗಳನ್ನು ಗ್ರಾಮಸ್ಥರು ಸಲ್ಲಿಸಿದರು.
ಗರ್ಭಿಣಿಯರಿಗೆ ಸೀಮಂತ; ಮಕ್ಕಳಿಗೆ ಅನ್ನಪ್ರಾಶನ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಬೈಲವಾಡ ಗ್ರಾಮದ ಐದು ಜನರಿಗೆ ಸಂಪ್ರದಾಯದ ಪ್ರಕಾರ ಸೀಮಂತ ಕಾರ್ಯವನ್ನು ನೆರವೇರಿಸಲಾಯಿತು. ಬಳಿಕ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ 30ಕ್ಕೂ ಅಧಿಕ ಕುಟುಂಬಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ಗಳನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಶಾಸಕ ಮಹಾಂತೇಶ ಕೌಜಲಗಿ ಸೇರಿದಂತೆ ಇತರ ಅಧಿಕಾರಿಗಳು ವಿತರಿಸಿದರು.
ಬಳಿಕ ಗ್ರಾಮದ ವಿದ್ಯಾರ್ಥಿಗಳ ಜತೆಗೆ ಮುಕ್ತವಾಗಿ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಮಕ್ಕಳ ಶೈಕ್ಷಣಿಕ ತೊಂದರೆಗಳಿಗೂ ಕಿವಿಯಾದರು. ಈ ವೇಳೆ ವಿದ್ಯಾರ್ಥಿಗಳು, ಬಸ್ ಸೌಲಭ್ಯ ಕೊರತೆ, ಶಿಕ್ಷಕರ ಕೊರತೆ ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸಿದರು.
ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು:
ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಭಾಗವಾಗಿ ಸಂಜೆ ವೇಳೆ ಸಂಗೀತ, ನೃತ್ಯಗಾಯನ, ಸಮೂಹ ನೃತ್ಯ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂದು ರಾತ್ರಿ ಡಿಸಿ ಎಂ.ಜಿ.ಹಿರೇಮಠ ಅವರು ಬಿಸಿಎಂ ಹಾಸ್ಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಎಸಿ ಶಶೀಧರ ಬಗಲಿ, ಬೈಲಹೊಂಗಲ ಬಸವಾರಾಜ ನಾಗರಾಳ, ಸಿಡಿಪಿಓ ರೇವತಿ ಹೊಸಮಠ, ತಾಪ ಇಓ ಸುಭಾಷ ಸಂಪಗಾವಿ ಸೇರಿದಂತೆ ವಿವಿಧ ಜಿಲ್ಲಾಮಟ್ಟದ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.