ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಡೆಸಲಾದ ಪಾದಯಾತ್ರೆ ಬೆಂಬಲಿಸಿದ್ದ ಬಸವರಾಜ್ ಬೊಮ್ಮಾಯಿ ಸಿಎಂ ಆಗಿರುವುದಕ್ಕೆ ಖುಷಿ ಇದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಾದ ಅರವಿಂದ ಬೆಲ್ಲದ್, ಬಸವನಗೌಡ ಪಾಟೀಲ ಯತ್ನಾಳ್ ಇಬ್ಬರಲ್ಲಿ ಒಬ್ಬರು ಸಿಎಂ ಆಗ್ತಾರೆಂಬ ನಿರೀಕ್ಷೆ ನಮ್ಮದಾಗಿತ್ತು. ನಾನು ಪ್ರಾಮಾಣಿಕವಾಗಿ ಮೀಸಲಾತಿಗಾಗಿ ಒತ್ತಾಯಿಸಿ ಪಾದಯಾತ್ರೆ ಮಾಡಿದ್ದೆ. ಈ ವೇಳೆ ಪ್ರಧಾನಿ ಮೋದಿಗೆ ಒಂದು ಸತ್ಯ ಗೊತ್ತಾಯಿತು.
ಬೆಂಗಳೂರಿನಲ್ಲಿ ಪಂಚಮಸಾಲಿ ಹೋರಾಟ ವೇಳೆ ಹತ್ತು ಲಕ್ಷ ಜನ ಸೇರಿದ್ದರು. ಇತಿಹಾಸದಲ್ಲಿ ಯಾವ ಹೋರಾಟದಲ್ಲಿ ಇಷ್ಟೊಂದು ಜನ ಯಾವತ್ತೂ ಸೇರಿರಲಿಲ್ಲ. ಬೆಂಗಳೂರಿಗೆ ನಮ್ಮ ಪಾದಯಾತ್ರೆ ಹೋದಮೇಲೆ ಪ್ರಧಾನಿಗೆ ಸತ್ಯ ಗೊತ್ತಾಯ್ತು. ಲಿಂಗಾಯತರಲ್ಲಿ ಬಹುಸಂಖ್ಯಾತರೆಂದ್ರೆ ಪಂಚಮಸಾಲಿಗಳು ಎಂಬುದು ಮೋದಿ ಅವರ ಅರಿವಿಗೆ ಬಂದಿತ್ತು. ಈ ಕಾರಣಕ್ಕೆ ನಾಯಕತ್ವ ಬದಲಾವಣೆ ವೇಳೆ ಪಂಚಮಸಾಲಿ ಸಮಾಜದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಹೆಸರನ್ನು ಪರಿಗಣಿಸಲಾಗಿತ್ತು.
ಬೆಂಗಳೂರಿಗೆ ಧರ್ಮೆಂದ್ರ ಪ್ರಧಾನ್ ಆಗಮಿಸುವ ವೇಳೆಯೂ ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದ್ರೆ ಕೊನೆ ಘಳಿಗೆಯಲ್ಲಿ ಯಾರು ಒತ್ತಡ ಮಾಡಿದರೂ ಗೊತ್ತಿಲ್ಲ. ಪಂಚಮಸಾಲಿಗಳನ್ನು ಸಿಎಂ ಮಾಡಿದ್ರೆ ಧರ್ಮಸ್ಥಳಕ್ಕೆ ಹೋಗ್ತಿವಿ ಅಂತ ಯಾರು ಒತ್ತಾಯಿಸಿದ್ರು ಗೊತ್ತಿಲ್ಲ. ಅವರ ಒತ್ತಡಕ್ಕೆ ಮಣಿದು ಪಂಚಮಸಾಲಿಗಳಿಗೆ ಸಿಎಂ ಸ್ಥಾನ ತಪ್ಪಿರಬಹುದು. ನಾಯಕತ್ವ ಬದಲಾವಣೆ ಆದ್ರೆ ಉತ್ತರ ಕರ್ನಾಟಕ ಲಿಂಗಾಯತ ಶಾಸಕರನ್ನೇ ಸಿಎಂ ಮಾಡಬೇಕೆಂದು ಆಗ್ರಹಿಸಿದ್ದೆವು. ನಮ್ಮ ಬಯಕೆಯಂತೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ನಮ್ಮ ಪಾದಯಾತ್ರೆಗೆ ಬೆಂಬಲಿಸಿದ ವ್ಯಕ್ತಿ ಸಿಎಂ ಆಗಿದ್ದು ಸಂತಸದ ಸಂಗತಿ. ಖಂಡಿತವಾಗಿ ನಮಗೆ ನ್ಯಾಯ ಸಿಗುತ್ತೆ ಎಂಬ ವಿಶ್ವಾಸವಿದೆ ಎಂದರು.
ಅಧಿವೇಶನದಲ್ಲಿ ಧ್ವನಿ ಎತ್ತಿದ್ದಕ್ಕೆ ಅಭಿನಂದಿಸುವೆ:
2ಎ ಮೀಸಲಾತಿ ನೀಡುವ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಇತರ ಶಾಸಕರಿಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಭಿನಂದನೆ ಸಲ್ಲಿಸಿದರು. ಮಾರ್ಚ್ 15ರಂದು ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಮಾತು ಕೊಟ್ಟಿತ್ತು. ಸರ್ಕಾರ ಕೊಟ್ಟ ಮಾತು ಸೆಪ್ಟೆಂಬರ್ 15ಕ್ಕೆ ಮುಕ್ತಾಯಗೊಂಡಿದೆ. ಮರಳಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದ್ರು.
ಮಲೆಮಹದೇಶ್ವರ ಬೆಟ್ಟದಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ಅಭಿಯಾನ ಆರಂಭಿಸಲಾಗಿದೆ. ಇಂದು 29ನೇ ದಿವಸಕ್ಕೆ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ಅಭಿಯಾನ ಕಾಲಿಟ್ಟಿದೆ. ಕರ್ನಾಟಕದ ಶೇ. 75ರಷ್ಟು ಭಾಗ ಪೂರೈಸಿ ಬೆಳಗಾವಿಗೆ ಬಂದಿದೆ. ಅಧಿವೇಶನದಲ್ಲಿ ಕೊಟ್ಟ ಮಾತು ನೆನಪಿಸಲು ಭಾರತದ ಬಾಹುಬಲಿ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಶಾಸಕರಾದ ಅರವಿಂದ ಬೆಲ್ಲದ್, ಸಿದ್ದು ಸವದಿ, ಶಿವಾನಂದ ಪಾಟೀಲ್ ಸಾಥ್ ಕೊಟ್ಟಿದ್ದಾರೆ. ಯತ್ನಾಳ್ ಜೊತೆ ದನಿಗೂಡಿಸಿ ಧರಣಿ ಮಾಡ್ತಿದ್ದಾರೆ. ಇದನ್ನು ನೋಡಿದ್ರೆ ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯ ಕೆಲವೇ ದಿನಗಳಲ್ಲಿ ನ್ಯಾಯ ಪಡೆದುಕೊಳ್ಳುವ ನಿರೀಕ್ಷೆ ಹೆಚ್ಚಾಗಿದೆ. ಅಧಿವೇಶನ ಮುಕ್ತಾಯದೊಳಗೆ ಯಾರಾದರೂ ಧ್ವನಿ ಎತ್ತುತ್ತಾರೆ ಎಂಬ ನಿರೀಕ್ಷೆ ಇತ್ತು. ಆಡಳಿತಾರೂಢ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಧ್ವನಿ ಎತ್ತಿದ್ದಾರೆ. ನಮ್ಮ ಜೊತೆ ಮೀಸಲಾತಿ ಬಯಸುವ ಎಲ್ಲ ಸಮುದಾಯದ ಪರ ಧ್ವನಿ ಎತ್ತಿದ್ದಾರೆ. ಪಂಚಮಸಾಲಿಗಳು ಎಲ್ಲರ ಜೊತೆ ಕೂಡಿ ಬಾಳೋರು ಎಂಬುದನ್ನು ಅಧಿವೇಶನದಲ್ಲಿ ತೋರಿಸುವ ಕೆಲಸ ಯತ್ನಾಳ್ ಗೌಡರು ಮಾಡಿದ್ದಾರೆ. ಧ್ವನಿ ಎತ್ತಿದ ನಾಲ್ಕು ನಾಯಕರಿಗೆ ಪಂಚಮಸಾಲಿ ಸಮುದಾಯದ ಪರ ಅನಂತ ಅನಂತ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಕೂಡಲೇ ಯತ್ನಾಳ್, ಬೆಲ್ಲದ್‌ರವರ ಹಕ್ಕೊತ್ತಾಯ ಮಂಡನೆಗೆ ಸಿಎಂ ಉತ್ತರ ಕೊಡಬೇಕು. ನಾಳೆ ಬೆಳಗಾವಿಗೆ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಬರ್ತಿದ್ದಾರೆ. ನಾಳೆ ಜಿಲ್ಲಾ ಮಟ್ಟದ ಪ್ರತಿಜ್ಞಾ ಪಂಚಾಯತ್ ಅಭಿಯಾನ ಗಾಂಧಿ ಭವನದಲ್ಲಿ ನಡೆಯಲಿದೆ. ಇದಾದ ಬಳಿಕ ರಾಜ್ಯ ಕಾರ್ಯಕಾರಿಣಿ ಸಭೆ ಕರೆಯಲಾಗಿದೆ. ಮುಂದಿನ ಹೋರಾಟ ಬಗ್ಗೆ ಚರ್ಚೆ ಮಾಡುತ್ತೇವೆ. ಬಸವರಾಜ ಬೊಮ್ಮಾಯಿ ಸಹ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಸಚಿವ ಸಿ.ಸಿ.ಪಾಟೀಲ್ ಹಾಗೂ ಯತ್ನಾಳ್ ಜೊತೆಗೂ ಸಿಎಂ ಚರ್ಚಿಸಿದ್ದಾರೆ. ಅಕ್ಟೋಬರ್ ಒಂದನೇ ತಾರೀಖಿನೊಳಗೆ ನಾವು ಗಡುವು ಕೊಟ್ಟಿದ್ದೇವೆ. ಒಂದನೇ ತಾರೀಖಿನೊಳಗೆ ನಮಗೆ ಸರ್ಕಾರ ನ್ಯಾಯ ದೊರಕಿಸಿಕೊಡುತ್ತೆಂಬ ವಿಶ್ವಾಸ ಇದೆ. ನಮ್ಮ ಅಭಿಯಾನ ಮುಕ್ತಾಯ ಆಗೋದ್ರೊಳಗಾಗಿ ನ್ಯಾಯ ಸಿಗದಿದ್ರೆ ಮತ್ತೆ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.