ಚಿಕ್ಕೋಡಿ (ಬೆಳಗಾವಿ): ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹಿರೇಕೋಡಿ ಆಶ್ರಮದ ಜೈನ ಮುನಿ ಕೊಲೆಗೀಡಾಗಿದ್ದಾರೆ. ಕಳೆದ ಬುಧವಾರ ಹಿರೇಕೋಡಿ ಆಶ್ರಮದ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾಗಿದ್ದರು. ರಾಯಬಾಗ ತಾಲೂಕಿನ ಕಟಕಬಾವಿ ಗ್ರಾಮದಲ್ಲಿ ಮಹಾರಾಜರು ಹತ್ಯೆಗೀಡಾಗಿರುವುದು ಪೊಲೀಸರಿಗೆ ತಿಳಿದಿದೆ. ಸ್ಥಳಕ್ಕೆ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಸಂಜೀವ್ ಪಾಟೀಲ್, ಬುಧವಾರ ರಾತ್ರಿಯಿಂದ ಸ್ವಾಮೀಜಿ ಕಾಣೆಯಾಗಿರುವ ಬಗ್ಗೆ ಶುಕ್ರವಾರ ಭಕ್ತರು ದೂರು ನೀಡಿದ್ದರು. ಭಕ್ತರ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದೆವು. ಬುಧವಾರ ಹಾಗೂ ಹಿಂದಿನ ದಿನಗಳ ಘಟನಾವಳಿಗಳ ಬಗ್ಗೆ ತಾಳೆ ಹಾಕಿ ತನಿಖೆ ನಡೆಸಿದೆವು. ತನಿಖೆ ವೇಳೆ ಆಶ್ರಮಕ್ಕೆ ಯಾರು ಬಂದು ಹೋಗಿದ್ದರೆಂಬುದರ ಬಗ್ಗೆ ವಿಚಾರಣೆ ನಡೆಸಲಾಯಿತು. ಸ್ವಾಮೀಜಿಗೆ ಪರಿಚಯವಿದ್ದ ವ್ಯಕ್ತಿಯ ವಿಚಾರಣೆಗೊಳಪಡಿಸಿದೆವು. ಆ ವ್ಯಕ್ತಿ ಆಶ್ರಮದಲ್ಲಿ ಮಹಾರಾಜರನ್ನು ಕೊಲೆ ಮಾಡಿ ಬೇರೆಡೆ ಶವ ಬಿಸಾಕಿದ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ಕೃತ್ಯಕ್ಕೆ ಸಹಕಾರ ನೀಡಿದ್ದ ಓರ್ವನನ್ನು ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಸ್ವಾಮೀಜಿ ನೀಡಿದ್ದ ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಗ್ರಾಮಸ್ಥರು ಹಾಗೂ ಮಾಧ್ಯಮಗಳಿಗೆ ಮನವಿ ಮಾಡುತ್ತೇನೆ. ಮೃತದೇಹ ಶೋಧಕಾರ್ಯ ಸ್ಥಳಕ್ಕೆ ಯಾರಿಗೂ ಪ್ರವೇಶವಿಲ್ಲ. ಸಾಕ್ಷ್ಯಾಧಾರ ಕಲೆಹಾಕಿ ನ್ಯಾಯಾಲಯಕ್ಕೆ ನೀಡಬೇಕಿರುವ ಹಿನ್ನೆಲೆ ಸದ್ಯಕ್ಕೆ ಕಾರ್ಯಾಚರಣೆ ಸ್ಥಳದಲ್ಲಿ ಯಾರಿಗೂ ಪ್ರವೇಶವಿಲ್ಲ. ಪ್ರಕರಣದ ತನಿಖೆ ಮುಂದುವರಿದಿದೆ. ಬೇರೆ ವ್ಯವಹಾರ ಏನಾದರೂ ಇತ್ತಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ವೈಯಕ್ತಿಕ ಕಾರಣಕ್ಕೆ ಹತ್ಯೆ ನಡೆದಿದೆ ಎಂದು ತಿಳಿಸಿದರು. ಆರೋಪಿಗೆ ನೀಡಿದ ಹಣವನ್ನು ಸ್ವಾಮೀಜಿ ವಾಪಸ್ ಕೇಳಿದ್ದಕ್ಕೆ ಹತ್ಯೆ ಮಾಡಲಾಗಿದೆ. ಆರೋಪಿಗಳು ಹೇಳಿದ ಹಲವು ಪ್ರದೇಶಗಳಲ್ಲಿ ಶೋಧ ಮಾಡಿದ್ದೇವೆ ಎಂದು ಎಸ್‌ಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದರು.
ನಂದಿ ಪರ್ವತದಲ್ಲಿ ವಾಸವಿದ್ದ ಜೈನಮುನಿ : ಶ್ರೀ ಕುಮಾರ್ ನಂದಿ ಮಹಾರಾಜರು ಕಳೆದ 15 ವರ್ಷಗಳಿಂದ ನಂದಿ ಪರ್ವತದಲ್ಲಿ ವಾಸವಾಗಿದ್ದರು. ಕಳೆದ ಬುಧವಾರ ಜೈನಮುನಿಗಳು ತಾವು ವಾಸವಿದ್ದ ಕೋಣೆಯಲ್ಲಿ ಪಿಂಚಿ, ಕಮಂಡಲ ಹಾಗೂ ಮೊಬೈಲನ್ನು ಬಿಟ್ಟು ಕಾಣೆಯಾಗಿದ್ದರು. ಸಾಮಾನ್ಯವಾಗಿ ಜೈನಮುನಿಗಳು ಎಲ್ಲೇ ಹೋಗಬೇಕಾದರೂ ಪಿಂಚಿ, ಕಮಂಡಲ ತಗೆದುಕೊಂಡು ಹೋಗುವ ಪದ್ಧತಿ ಇದೆ. ಆದರೆ ಜೈನ ಮುನಿ ನಾಪತ್ತೆಯಾದ ದಿನ ಇವುಗಳು ಆಶ್ರಮದಲ್ಲೇ ಇದ್ದುದರಿಂದ ಭಕ್ತರ ಆತಂಕಕ್ಕೆ ಕಾರಣವಾಗಿತ್ತು.
ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದಲ್ಲಿ ನೀರವಮೌನ : ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಹತ್ಯೆ ಪ್ರಕರಣಕ್ಕೆ ಹಿರೇಕೋಡಿಯಲ್ಲಿ ನೀರವಮೌನ ಆವರಿಸಿದೆ. ಮುಂಜಾಗ್ರತಾ ಕ್ರಮವಾಗಿ ಹಿರೇಕೋಡಿ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಸ್ವಾಮೀಜಿ ನೆನೆದು ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ : ಹಿರೇಕೋಡಿ ನಂದಿಪರ್ವತ ಜೈನ ಆಶ್ರಮದಿಂದ ಜೈನ ಮುನಿ ನಾಪತ್ತೆ: ಶ್ರಾವಕರಿಂದ ದೂರು ಸಲ್ಲಿಕೆ