ಬೆಳಗಾವಿ: ಉಪಚುನಾವಣೆಯೇ ಘೋಷಣೆ ಆಗಿಲ್ಲ. ಹೀಗಿದ್ದ ಮೇಲೆ ಅಭ್ಯರ್ಥಿಗಳು ಯಾರಾಗ್ತಾರೆ? ಏನು? ಎಂಬ ಚರ್ಚೆಗೆ ಅವಕಾಶವೇ ಇರುವುದಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಬಿಜೆಪಿ ಗ್ರಾಮ್ ಸ್ವರಾಜ್ಯ ಸಮಾವೇಶ ಮುಗಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭೆಗೆ ಚುನಾವಣೆಯೇ ಘೋಷಣೆ ಆಗಿಲ್ಲ. ಇನ್ನು ಅಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಅಪ್ರಸ್ತುತ. ಆದ್ರೆ, ನನ್ನ ಹೆಸರು ಕೇಳಿ ಬರುತ್ತಿರುವುದರ ಮೂಲ ಯಾವುದು ಎಂಬುವುದು ನನಗೂ ಗೊತ್ತಾಗಬೇಕಿದೆ ಎಂದರು.
ಬೆಳಗಾವಿ ಉಪಚುನಾವಣೆ ಅಭ್ಯರ್ಥಿ ಕುರಿತಾಗಿ ಹೈಕಮಾಂಡ್ ಸೇರಿದಂತೆ ರಾಜ್ಯದಲ್ಲಿ ಎಲ್ಲಿಯೂ ಚರ್ಚೆ ಆಗಿಲ್ಲ. ಬಲ್ಲ ಮೂಲಗಳ ಮಾಹಿತಿ ಎಂದು ಹೇಳುತ್ತಿರಲ್ಲ, ಆ ಬಲ್ಲ ಮೂಲ ಯಾವುದು ಎಂದು ನೀವೇ ಹೇಳಿರಿ ಎಂದು ಮಾಧ್ಯಮಗಳಿಗೆ ಶೆಟ್ಟರ್ ಮರು ಪ್ರಶ್ನೆ ಹಾಕಿದರು.
ಇದನ್ನೂ ಓದಿ : ಬಿಜೆಪಿ ಸಮಾಜ ಒಡೆಯುವ ಕೆಲಸವನ್ನು ಮಾಡುತ್ತಿಲ್ಲ; ಬೆಳಗಾವಿಯಲ್ಲಿ ಡಿಕಿಶಿಗೆ ಟಾಂಗ್ ಕೊಟ್ಟ ಶೆಟ್ಟರ್
ಉಪಚುನಾವಣೆ ಟಿಕೆಟ್ ವಿಚಾರದ ನಿಲುವಿಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೋರ್ ಕಮೀಟಿ ಸಭೆಯಲ್ಲಿ ನನ್ನ ಅಭಿಪ್ರಾಯ ತಿಳಿಸುತ್ತೇನೆ. ಕೋರ್ ಕಮೀಟಿ ಸದಸ್ಯನಾಗಿ, ಓರ್ವ ಮಾಜಿ ಸಿಎಂ ಆಗಿ ಕೋರ್ ಕಮೀಟಿಯಲ್ಲಿ ಚರ್ಚಿಸುವುದನ್ನು ನಾನು ಮಾಧ್ಯಮಗಳ ಮುಂದೆ ಚರ್ಚಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಸಂಪುಟ ವಿಸ್ತರಣೆ ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಹೀಗಾಗಿ ವರಿಷ್ಠರ ಜೊತೆ ಚರ್ಚಿಸಿ ಆದಷ್ಟು ಬೇಗನೇ ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.
ಸರ್ಕಾರದ ವಿರುದ್ಧ ಹೆಚ್.ವಿಶ್ವನಾಥ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಅವರ ಅಭಿಪ್ರಾಯಗಳ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಬಹಿರಂಗವಾಗಿ ಹೇಳಿಕೆ ನೀಡುವವರು ಏನಾದರೂ ಇದ್ದರೆ ರಾಜ್ಯಾಧ್ಯಕ್ಷರು, ವರಿಷ್ಠರ ಬಳಿ ಬಂದು ಮಾತನಾಡಬೇಕು. ನಾಲ್ಕು ಗೋಡೆಗಳ ಮಧ್ಯ ಮಾತನಾಡುವುದನ್ನು ಸಾರ್ವಜನಿಕವಾಗಿ ಮಾತನಾಡಬಾರದು ಎಂದು ಸಲಹೆ ನೀಡಿದರು.