ಬೆಳಗಾವಿ: ಬಡಾವಣೆಯ ಕೆಲವರ ಗುಂಪೊಂದು ಓರ್ವ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಘಟಪ್ರಭಾದ ಮೃತ್ಯುಂಜಯ ಸರ್ಕಲ್ನಲ್ಲಿ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಈ ಮಹಿಳೆ ಹನಿಟ್ರ್ಯಾಪ್ ಹಾಗೂ ಬ್ಲಾಕ್ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದಾಳೆ ಎಂದು ಆರೋಪಿಸಿರುವ ಬಡಾವಣೆಯ ಕೆಲವರ ಗುಂಪು ಈ ರೀತಿ ದೌರ್ಜನ್ಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಈ ಮಹಿಳೆಯು ಅಧಿಕಾರಿಯೊಬ್ಬರಿಗೆ ನೀಡಿದ ಕಿರುಕುಳದ ಬಗ್ಗೆ ಸ್ಥಳೀಯರು ದೂರು ಕೊಟ್ಟಿದ್ದರು. ಆದರೆ, ಇದಕ್ಕೂ ಮೊದಲು ಈ ಮಹಿಳೆ ತಮಗೂ ಸಹ ಕಿರುಕುಳ ನೀಡುತ್ತಿದ್ದಳು ಎಂದು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ನಿನ್ನೆ ರಾತ್ರಿ ಈ ರೀತಿಯ ಘಟನೆ ನಡೆದಿದೆ.
ದುಷ್ಕರ್ಮಿಗಳಿಂದ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಕುರಿತು ಮಾತನಾಡಿದ್ದಾರೆ. ''ಕಳೆದ ತಿಂಗಳ 30ರಂದು ಸಂಘಟನೆಯೊಂದರ ಕೆಲವರು ನನ್ನ ಬಳಿ ಬಂದು 5 ಲಕ್ಷ ರೂ. ಕೊಡು, ಇಲ್ಲವಾದರೆ ನಿನ್ನ ಗಡಿಪಾರು ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಆಗ ನಾನು ಭಿಕ್ಷೆ ಬೇಡಿಕೊಂಡು ಜೀವನ ಮಾಡುತ್ತೇನೆ. ನಾನು ಎಲ್ಲಿಂದ ಹಣ ಕೊಡಬೇಕು ಎಂದು ಪ್ರಶ್ನಿಸಿದ್ದೆ. ಮತ್ತೆ ನಿನ್ನೆ ರಾತ್ರಿ ನಮ್ಮ ಮನೆಗೆ ಬಂದ ಅವರು, 5 ಲಕ್ಷ ಕೊಡು ಎಂದು ಪೀಡಿಸಿದ್ದರು. ನಾನ್ಯಾಕೆ ಹಣ ಕೊಡಬೇಕು ಎನ್ನುತ್ತಿದ್ದಂತೆ ನನಗೆ ಸಿಕ್ಕಾಪಟ್ಟೆ ಹೊಡೆದರು. ನಂತರ ಬೆತ್ತಲೆಗೊಳಿಸಿ, ಬಳಿಕ ಚಪ್ಪಲಿ ಮಾಲೆ ಹಾಕಿ ಮೆರವಣಿಗೆ ಮಾಡಿದರು'' ಎಂದು ಕಣ್ಣೀರು ಹಾಕಿದ್ದಾಳೆ.
ನೊಂದ ಮಹಿಳೆಯ ಪತಿ ಮಾಧ್ಯಮಗಳ ಜೊತೆಗೆ ಮಾತನಾಡಿ, ''ನಿನ್ನೆ ರಾತ್ರಿ 8.30ರ ಸುಮಾರಿಗೆ ಊಟ ಮಾಡುತ್ತಿರುವಾಗ ನಮ್ಮ ಮನೆಗೆ ಬಂದ 36 ಜನರು ನನ್ನನ್ನು ಹೊಡೆದು ಕೂಡಿ ಹಾಕಿದರು. ನನ್ನ ನಾಲಿಗೆಗೂ ಗಾಯಗೊಳಿಸಿದ್ದಾರೆ. ಬಳಿಕ ನನ್ನ ಹೆಂಡತಿಗೆ ರಾಡ್ನಿಂದ ಮನಬಂದಂತೆ ಹೊಡೆದು, ಬೆತ್ತಲೆಗೊಳಿಸಿ ಅತ್ಯಾಚಾರ ಮಾಡಿದರು. ನಿನ್ನ ಗಡಿಪಾರು ಮಾಡುವಂತೆ ನಮ್ಮ ಸಂಘಟನೆ ವತಿಯಿಂದ ಅಧಿಕಾರಿಯೊಬ್ಬರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿ, ಮನೆಯಿಂದ ಕೊರಳಲ್ಲಿ ಚಪ್ಪಲಿ ಹಾರ ಹಾಕಿ ಪೊಲೀಸ್ ಠಾಣೆವರೆಗೂ ಮೆರವಣಿಗೆ ಮಾಡಿದ್ದಾರೆ'' ಎಂದು ಆರೋಪಿಸಿದರು.
ಎಸ್ಪಿ ಪ್ರತಿಕ್ರಿಯೆ: ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಓರ್ವ ಆರೋಪಿ ಬಂಧಿಸಲಾಗಿದ್ದು, ಇನ್ನುಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬುದ್ಧಿಮಾಂದ್ಯ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ