ಬೆಳಗಾವಿ: ಮಹಾಮಾರಿ ಕೊರೋನಾ ಹೊಡೆತಕ್ಕೆ ಇಂದಿಗೂ ಹಲವು ಸಾರಿಗೆ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಇದ್ದರೂ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ.
ಕೇಂದ್ರ ಸರ್ಕಾರದ ಉಡಾನ್-3 ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಲಾಕ್‍ಡೌನ್ ಮುಂಚೆ 28 ವಿಮಾನಗಳ ಆರಂಭ ಹಾಗೂ ನಿರ್ಗಮನ ಆಗುತ್ತಿತ್ತು. ಲಾಕ್‍ಡೌನ್ ಸಡಿಲಿಕೆ ಬಳಿಕ ಇದರ ಸಂಖ್ಯೆ ಹೆಚ್ಚಾಗಿದೆ. ಲಾಕ್‍ಡೌನ್‍ಗಿಂತ ಮೊದಲು ಇಂಡಿಗೋ ಏರ್ಲೈನ್ಸ್, ಸ್ಪೈಸ್ ಜೆಟ್, ಸ್ಟಾರ್ ಏರ್ಲೈನ್ಸ್, ಟ್ರೂ ಜೆಟ್, ಏರ್ ಇಂಡಿಯಾ ಸಂಸ್ಥೆಗಳ ವಿಮಾನಗಳು ಸಾಂಬ್ರಾ ವಿಮಾನ ನಿಲ್ದಾಣದಿಂದ ರಾಜ್ಯ ಹಾಗೂ ದೇಶದ 9 ನಗರಗಳಾದ ಅಹ್ಮದಾಬಾದ್, ಇಂದೋರ್, ಬೆಂಗಳೂರು, ಮೈಸೂರು, ಕಡಪ, ಹೈದ್ರಾಬಾದ್, ತಿರುಪತಿ, ಮುಂಬೈ ಹಾಗೂ ಪುಣೆಗೆ ಸಂಪರ್ಕ ಕಲ್ಪಿಸಿತ್ತು. ಪ್ರಸ್ತುತವೂ ಈ ಐದು ಸಂಸ್ಥೆಗಳು ಬೆಳಗಾವಿಯಲ್ಲಿ ಕಾರ್ಯಚರಣೆ ನಡೆಸುತ್ತಿದ್ದು, ತಿರುಪತಿ ಹಾಗೂ ಕಡಪಾ ಮಾರ್ಗಮಧ್ಯೆ ವಿಮಾನಯಾನ ಮಾತ್ರ ಆರಂಭವಾಗಿಲ್ಲ. ಉಳಿದಂತೆ ಎಲ್ಲಾ ಕಡೆಯೂ ವಿಮಾನ ಹಾರಾಟ ನಡೆಯುತ್ತಿದ್ದು, ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಈ ಮಾಸಾಂತ್ಯಕ್ಕೆ 20 ಸಾವಿರ ಗಡಿ ದಾಟಲಿದೆ ಪ್ರಯಾಣಿಕರ ಸಂಖ್ಯೆ:
ಲಾಕ್‍ಡೌನ್ ಸಡಿಲಿಕೆ ಆದ ಬಳಿಕ ಮೇ 25 ರಿಂದ ದೇಶಿಯ ವಿಮಾನ ಹಾರಾಟ ಸೇವೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಮೇ 25 ರಿಂದ ಮೇ 30ರವರೆಗೆ 445 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದು 26 ವಿಮಾನಗಳ ಆಗಮನ ನಿರ್ಗಮನವಾಗಿದೆ. ಜೂನ್ ತಿಂಗಳಲ್ಲಿ 10,346 ಪ್ರಯಾಣಿಕರು ವಿಮಾನ ಸೇವೆ ಪಡೆದಿದ್ದು 386 ವಿಮಾನಗಳ ಆಗಮನ ಹಾಗೂ ನಿರ್ಗಮನವಾಗಿದೆ. ಜುಲೈ ತಿಂಗಳಲ್ಲಿ 14,500 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದು 443 ವಿಮಾನಗಳ ಆಗಮನ ಹಾಗೂ ನಿರ್ಗಮನವಾಗಿದೆ. ಆಗಸ್ಟ್ ತಿಂಗಳಲ್ಲಿ 18,280 ಪ್ರಯಾಣಿಕರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದ್ದು 421 ವಿಮಾನಗಳ ಆಗಮನ-ನಿರ್ಗಮನವಾಗಿದೆ. ಸೆಪ್ಟೆಂಬರ್ 15ರವರೆಗೆ 11,000 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದು, 240 ವಿಮಾನಗಳ ಆಗಮನ- ನಿರ್ಗಮನವಾಗಿದೆ. ಈ ಮಾಸಾಂತ್ಯಕ್ಕೆ ಪ್ರಯಾಣಿಕರ ಸಂಖ್ಯೆ 20 ಸಾವಿರ ಗಡಿ ದಾಟುವ ನಿರೀಕ್ಷೆಯನ್ನು ಬೆಳಗಾವಿ ವಿಮಾನ ನಿಲ್ದಾಣದ ಅಧಿಕಾರಿಗಳು ಹೊಂದಿದ್ದಾರೆ.
ಕೋವಿಡ್ ಹಿನ್ನಲೆ ಮುನ್ನೆಚ್ಚರಿಕೆ ಕ್ರಮ:
ಮಹಾಮಾರಿ ಕೊರೋನಾ ಹಿನ್ನಲೆ ವಿಮಾನ ನಿಲ್ದಾಣದಲ್ಲಿ ಅಗತ್ಯ ಮುನ್ನೆಚ್ಛರಿಕೆ ಕ್ರಮ ವಹಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಪ್ರತಿ ಪ್ರಯಾಣಿಕರಿಗೆ ಸ್ಯಾನಿಟೈಸರ್, ಸ್ಕ್ರೀನಿಂಗ್ ಮಾಡಲಾಗುತ್ತದೆ. ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳೇ ಮಾಸ್ಕ್, ಸ್ಯಾನಿಟೈಸರ್, ಫೇಸ್ ಮಾಸ್ಕ್ ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಪ್ರಯಾಣ ಮುಗಿಸಿ ಬರುವ ಪ್ರಯಾಣಿಕರ ಪ್ರತಿ ಬ್ಯಾಗ್‍ಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಈ ಕಾರಣಕ್ಕೆ ರಾಜ್ಯದಲ್ಲೇ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸುವ ಪ್ರಯಾಣಿಕರ ಸಂಖ್ಯೆ ವೃದ್ಧಿಯಾಗುತ್ತಿದೆ ಎಂದು ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ್ ಮೌರ್ಯ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.