ಬೆಳಗಾವಿ: ನವರಾತ್ರಿ ಹಬ್ಬದ ಆಚರಣೆ ಸಂದರ್ಭದಲ್ಲಿ 120 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಕೆಎಂಎಫ್ ಹೊಸ ದಾಖಲೆ ಸೃಷ್ಟಿಮಾಡಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಫಾಲ್ಸ್ ರಸ್ತೆಯ ಜೆಎಸ್‍ಎಸ್ ಕಾಲೇಜ್ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ಆರಂಭಿಸಲಾದ ನಂದಿನಿ ಎಕ್ಸ್ಕ್ಲೂಸಿವ್ ಪಾರ್ಲರ್ ಉದ್ಘಾಟಿಸಿ ಅವರು ಮಾತನಾಡಿದರು.
ನವರಾತ್ರಿಯ ಒಂಬತ್ತು ದಿನಗಳ ಅವಧಿಯಲ್ಲಿ ಸಿಹಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಿ ನಮ್ಮ ಸಂಸ್ಥೆಯ ಮಾರಾಟ ಪ್ರಮಾಣವು ಇದುವರೆಗಿದ್ದ ಎಲ್ಲ ದಾಖಲೆಗಳನ್ನು ಅಳಿಸಿ ಮಾರಾಟ ಪ್ರಮಾಣದಲ್ಲಿ ಹೊಸ ದಾಖಲೆ ಬರೆದಿದೆ ಎಂದು ಹೇಳಿದರು.
ಕೆಎಂಎಫ್‍ನಿಂದ ಬಿಹಾರ ಫೆಡರೇಷನ್‍ಗೆ 1,500 ಮೆ. ಟನ್ ಕೆನೆಭರಿತ ಹಾಲಿನ ಪುಡಿ, 650 ಮೆ. ಟನ್ ಕೆನೆ ರಹಿತ ಹಾಲಿನ ಪುಡಿ ಮತ್ತು 800 ಮೆ. ಟನ್ ಬೆಣ್ಣೆ ಮಾರಾಟ ಮಾಡಲು ಆದೇಶ ನೀಡಲಾಗಿದೆ. ಪ್ರಸ್ತುತ ಬೆಣ್ಣೆ 12.6 ಮೆ. ಟನ್ ದಾಸ್ತಾನು ಇದ್ದು, ಪ್ರಸ್ತುತ ಕೆನೆ ರಹಿತ ಹಾಲಿನ ಪುಡಿ 27.5 ಮೆ. ಟನ್ ದಾಸ್ತಾನು ಇರುತ್ತದೆ. ಕೆಎಂಎಫ್‍ನ ಒಟ್ಟಾರೆ ಹಾಲಿನ ಶೇಖರಣೆ ಪ್ರತಿದಿನ 80 ಲಕ್ಷ ಲೀಟರ್ ಇದೆ ಎಂದು ಹೇಳಿದರು.
ಹಾಲು ಮತ್ತು ಮೊಸರು, ಗುಡ್‍ಲೈಫ್ ಮತ್ತು ಫ್ಲೆಕ್ಸಿ ಹಾಲಿನ ಮಾರಾಟ ಒಟ್ಟಾರೆ ದಿನಂಪ್ರತಿ 45.80 ಲಕ್ಷ ಲೀಟರ್ಗಳಾಗಿದ್ದು, ಇತರ ಹೊರ ರಾಜ್ಯದ ಸಹಕಾರಿ ಡೈರಿಗಳಿಗೆ ಸಗಟು ಹಾಲಿನ ಮಾರಾಟ ದಿನಂಪ್ರತಿ 3.52 ಲಕ್ಷ ಲೀಟರ್ ಇದೆ ಎಂದು ಹೇಳಿದ ಅವರು, ರಾಜ್ಯಾದ್ಯಂತ ಪ್ರಸ್ತುತ 1,462 ನಂದಿನಿ ಪಾರ್ಲರ್ ಮತ್ತು 220ಕ್ಕೂ ಅಧಿಕ ನಂದಿನಿ ಶಾಪ್ಗಳಿವೆ ಎಂದು ಹೇಳಿದರು.
ಗೋಕಾಕ್ನಲ್ಲಿ ಆರಂಭಿಸಲಾಗಿರುವ ನಂದಿನಿ ಶೇಖರಣಾ ಕೇಂದ್ರದಲ್ಲಿ ನಂದಿನಿಯ ಎಲ್ಲ ಬಗೆಯ ಉತ್ಪನ್ನಗಳು ಗ್ರಾಹಕರಿಗೆ ಎಂಆರ್ಪಿ ಬೆಲೆಯಲ್ಲಿ ಲಭ್ಯವಿವೆ. ಬೆಳಗಾವಿ ಜಿಲ್ಲೆಯಲ್ಲಿ ರಾಮದುರ್ಗ, ಬೈಲಹೊಂಗಲ, ರಾಯಬಾಗ, ಖಾನಾಪೂರ ಮತ್ತು ಗೋಕಾಕ್ನಲ್ಲಿ ಪಾರ್ಲರ್ ತೆರೆಯಲಾಗಿದೆ. ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸುವ ಹಿನ್ನೆಲೆಯಲ್ಲಿ ಇಂತಹ ಪಾರ್ಲರ್ಗಳನ್ನು ತೆರೆಯಲಾಗುತ್ತಿದೆ. ಪ್ರತಿ ತಾಲೂಕು ಕೇಂದ್ರಗಳಲ್ಲಿ ಇಂತಹ ಶೇಖರಣಾ ಕೇಂದ್ರಗಳನ್ನು ಆರಂಭಿಸುವ ಮೂಲಕ ಪ್ರತಿ ಹಳ್ಳಿ - ಹಳ್ಳಿಗಳಿಗೆ ನಂದಿನಿ ಎಲ್ಲ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಗ್ರಾಹಕರ ಮತ್ತು ರೈತರ ಸಹಕಾರವೇ ನಮ್ಮ ಸಂಸ್ಥೆಗೆ ದೊಡ್ಡ ಶಕ್ತಿಯಾಗಿದೆ ಎಂದು ಹೇಳಿದರು.