ಚಿಕ್ಕೋಡಿ : ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ ಕರಿಯೋಗಸಿದ್ದೇಶ್ವರ ಕನ್ನಡ ಮಾಧ್ಯಮ ಶಾಲೆಯ ಉದ್ಘಾಟನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ನೂತನ ಶಾಲಾ ಕಟ್ಟಡ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಹಾಗೂ ತರಗತಿ ಕೊಠಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಕಾಗಿನೆಲೆ ಕನಕ ಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಇತರ ಮಠಾಧೀಶರು ಭಾಗಿಯಾಗಿದ್ದರು.
ಓದಿ: ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ 'ಕೈಜನ್-21' ಕಾರ್ಯಕ್ರಮ: ಕಣ್ಮನ ಸೆಳೆದ ವಿದ್ಯಾರ್ಥಿಗಳ ಫ್ಯಾಷನ್ ಶೋ
ಈ ಸಂದರ್ಭದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ, ಒಂದು ಹೆಣ್ಣು ಮಗಳು ಶಾಲೆ ಕಲಿತರೆ ಇಡೀ ಮನೆಯೇ ಶಾಲೆ ಕಲಿತಂತೆ. ಇಂತಹ ಒಂದು ಕುಗ್ರಾಮದಲ್ಲಿ ಒಂದು ಶಾಲೆ ನಿರ್ಮಾಣ ಮಾಡಬೇಕಾದರೆ ಇಲ್ಲಿನ ಗುರುಗಳಾದ ಅಮರೇಶ್ವರ ಮಹಾರಾಜರು ಕಷ್ಟಪಟ್ಟಿದ್ದು ಅಷ್ಟಿಷ್ಟಲ್ಲ. ನಮ್ಮ ತಾಯಿ ಕೂಡ ನಮಗೆ ಶಾಲೆ ಕಲಿಸಬೇಕಾದರೆ ಕಷ್ಟಪಟ್ಟಿದ್ದು ತುಂಬಾನೆ ಇದೆ ಎಂದರು.
ಶಾಲೆ ಆರಂಭ ಮಾಡಲು ಯಾವುದೇ ಮಠಾಧೀಶರು ಮುಂದೆ ಬಂದರೆ, ಸರ್ಕಾರ ಹಾಗೂ ವೈಯುಕ್ತಿಕವಾಗಿ ಯಾವತ್ತೂ ಸಹಾಯ ಮಾಡಲು ಸಿದ್ದ. ಇಲ್ಲಿನ ಮಠಾಧೀಶರು ಕುಗ್ರಾಮದಲ್ಲಿ ಶಾಲೆ ಆರಂಭ ಮಾಡುವುದರಿಂದ ಶಿಕ್ಷಣಕ್ಕೆ ಹೆಚ್ಚಿನ ಬಲ ಸಿಗಲಿದೆ. ಕೇವಲ 6-7 ನೇ ತರಗತಿವರೆಗೆ ಮಾತ್ರ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಶಾಲೆ ಬಿಡಿಸುವ ವ್ಯವಸ್ಥೆ ಗ್ರಾಮೀಣ ಭಾಗದಲ್ಲಿ ಇದೆ. ಇದು ತೊಲಗಬೇಕು, ಪ್ರತಿ ಹೆಣ್ಣು ಮಗುವಿಗೂ ಶಿಕ್ಷಣ ಸಿಗಬೇಕು ಎಂದು ಹೇಳಿದರು.