ಬೆಳಗಾವಿ: ತಾಲೂಕಿನ ಪೀರನವಾಡಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ (ಚಿನ್ನಪಟ್ಟಣ) ವೃತ್ತ ಹೆಸರಿನ ನಾಮಫಲಕವನ್ನು ಗ್ರಾಮಸ್ಥರ ಸಮ್ಮುಖದಲ್ಲಿಯೇ ಅನಾವರಣ ಮಾಡಲಾಯಿತು.
ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಸಂಬಂಧ ನಡೆದ ಜಿಲ್ಲಾಡಳಿತ ಹಾಗೂ ಗ್ರಾಮಸ್ಥರ ಸಂಧಾನ ಸಭೆ ನಿರ್ಣಯದಂತೆ ಇವತ್ತು ಮಾರಾಠಿ ಭಾಷಿಕರು 9 ಅಡಿಯ ಕನ್ನಡ-ಮರಾಠಿ ಎರಡೂ ಭಾಷೆಯಲ್ಲಿರುವ ಬೃಹತ್ ನಾಮಫಲಕವನ್ನು ಅನಾವರಣ ಮಾಡಿದ್ದಾರೆ. ನಾಮಪಲಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಚೌಕ್, ಪೀರನವಾಡಿ(ಚಿನ್ನಪಟ್ಟಣ) ಎಂದು ಬರೆಯಲಾಗಿದೆ.
ಇದನ್ನೂ ಓದ: ಸಂಧಾನ ಸಕ್ಸಸ್: ಅಭಿಮಾನಿಗಳು ಗುರುತಿಸಿದ್ದ ಜಾಗದಲ್ಲೇ ರಾಯಣ್ಣನ ಪುತ್ಥಳಿ
ಇದಲ್ಲದೆ ಮೂರ್ತಿಗಳು ಇರುವ ಸ್ಥಳದಲ್ಲಿ ಒಂದೊಂದೇ ಧ್ವಜ ಇರಬೇಕೆಂಬ ಸಂಧಾನ ಸಭೆಯ ನಿರ್ಣಯದಂತೆ ಸಂಗೊಳ್ಳಿ ರಾಯಣ್ಣ ಮೂರ್ತಿ ಇರುವ ಸ್ಥಳದಲ್ಲಿ ಕನ್ನಡದ ಧ್ವಜ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಇರುವ ಸ್ಥಳದಲ್ಲಿ ಭಾಗವಧ್ವಜ ಇಡಲಾಗಿದೆ.
ಈ ವೇಳೆ ಪೀರನವಾಡಿ ನಾಕಾದಲ್ಲಿದ್ದ ಹೆಚ್ಚುವರಿ ಭಾಗವಧ್ವಜ ಹಾಗೂ ಕನ್ನಡ ಧ್ವಜವನ್ನೂ ಪೊಲೀಸರ ಸಮ್ಮುಖದಲ್ಲಿ ತೆರವು ಮಾಡಲಾಯಿತು. ಇದಕ್ಕೂ ಮುಂಚೆಯೇ ರಾಯಣ್ಣ ಮತ್ತು ಶಿವಾಜಿ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಶಿವಾಜಿ ಚೌಕ್ ನಾಮಫಲಕ ಅನಾವರಣ ನೆರವೇರಿಸಲಾಯಿತು.