ಬೆಳಗಾವಿ : ಐದು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿರುವ ಪ್ರಸ್ತುತ ಕಾಂಗ್ರೆಸ್ ಸರ್ಕಾರ ತಾವೇ ಘೋಷಿಸಿದ 6ನೇ ಗ್ಯಾರಂಟಿ ಏಕೆ ಜಾರಿಗೆ ತರುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಿಸುವ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಈ ಬಜೆಟ್ನಲ್ಲಿ ತಾವು ಕೊಟ್ಟ ಮಾತಿನಂತೆ ನಮ್ಮ ವೇತನ ಹೆಚ್ಚಿಸಲು ಆದೇಶ ಹೊರಡಿಸಬೇಕು ಎಂದು ಬೆಳಗಾವಿಯ ಅಂಗನವಾಡಿ ಕಾರ್ಯಕರ್ತೆಯರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹೌದು, ಕಡಿಮೆ ವೇತನದಲ್ಲಿ ನಾವೆಲ್ಲಾ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಪ್ರತಿ ಬಾರಿ ಚುನಾವಣೆ ಬಂದಾಗಲೂ ನಮಗೆ ರಾಜಕೀಯ ಪಕ್ಷಗಳು ಹೊಸ ಆಸೆ ಚಿಗುರೊಡೆಯುವಂತೆ ಮಾಡುತ್ತವೆ. ಆದರೆ, ಗೆದ್ದ ಬಳಿಕ ಆ ಬಗ್ಗೆ ಮರೆತು ಬಿಡುತ್ತಾರೆ. ಈಗ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವಾದರೂ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂಬುದು ಅಂಗನವಾಡಿ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷೆ ದೊಡ್ಡವ್ವ ಪೂಜಾರಿ, ಚುನಾವಣೆಗೂ ಮುಂಚೆ 15 ಸಾವಿರ ರೂ. ವೇತನ ಕೊಡುತ್ತೇವೆ ಎಂದಿದ್ದಾರೆ. ಆದರೆ, 21 ಸಾವಿರ ವೇತನ ನೀಡಬೇಕು ಎನ್ನುವುದು ನಮ್ಮ ಬೇಡಿಕೆ. ಎಷ್ಟು ಕೊಡುತ್ತಾರೆ ನೋಡಬೇಕಿದೆ. ಇನ್ನು 2019ರಲ್ಲಿ ನಮಗೆ ಕೊಟ್ಟಿದ್ದ ಮೊಬೈಲ್ಗಳು ಹಾಳಾಗಿ ಹೋಗಿವೆ. ಅದೇ ಮೊಬೈಲ್ ಗಳಿಂದಲೇ ಸಿಎನ್ಎಸ್, ಗೃಹಲಕ್ಷ್ಮೀ, ಗೃಹಜ್ಯೋತಿ ಸೇರಿ ಸರ್ಕಾರದ ವಿವಿಧ ಇಲಾಖೆಯ ಸರ್ವೇಗಳನ್ನು ಮಾಡುವಂತೆ ಅಧಿಕಾರಿಗಳು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಜುಲೈ 10ರಂದು ಆ ಮೊಬೈಲ್ ವಾಪಸ್ ಕೊಡಲಿದ್ದೇವೆ. ಹೀಗಾಗಿ ಸುಪ್ರೀಂಕೋರ್ಟ್ ಆದೇಶದ ಪ್ರಕಾರ, 2023ರಲ್ಲಿ ನಿವೃತ್ತಿ ಹೊಂದಿದವರಿಗೂ ಪಿಂಚಣಿ ನೀಡಬೇಕು. ಬಾಕಿ ಇರುವ ಕಟ್ಟಡ ಬಾಡಿಗೆ ತಕ್ಷಣವೇ ಒದಗಿಸಬೇಕು. ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.
ಬಜೆಟ್ನಲ್ಲಿ 6ನೇ ಗ್ಯಾರಂಟಿಯನ್ನೂ ಜಾರಿಗೆ ತರಬೇಕು: ಸಿಐಟಿಯು ಬೆಳಗಾವಿ ತಾಲೂಕು ಅಧ್ಯಕ್ಷೆ ಮಂದಾ ನೇವಗಿ ಮಾತನಾಡಿ, ಚುನಾವಣೆ ಪ್ರಚಾರ ವೇಳೆ ಖಾನಾಪುರಕ್ಕೆ ಬಂದಿದ್ದ ಪ್ರಿಯಾಂಕಾ ಗಾಂಧಿ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ. ವೇತನ ನೀಡುತ್ತೇವೆ ಎಂದಿದ್ದರು. ಅದೇ ರೀತಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರ ವೇತನ ಹೆಚ್ಚಿಸುತ್ತೇವೆ ಎಂದು ಘೋಷಣೆ ಮಾಡಿದ್ದರು. ಈ ಬಗ್ಗೆ ಯಾರೂ ಯಾಕೆ ಮಾತನಾಡುತ್ತಿಲ್ಲ. ಕೊರೊನಾ ತುರ್ತು ಸಂದರ್ಭದಲ್ಲಿ ಜೀವದ ಹಂಗು ತೊರೆದು ನಾವೆಲ್ಲಾ ಇಷ್ಟು ಕೆಲಸ ಮಾಡಿದರೂ ನಮಗೆ ಸರಿಯಾದ ಬೆಲೆ ಕೊಡುತ್ತಿಲ್ಲ. ಕೊಟ್ಟ ಮಾತಿನಂತೆ ಈ ಬಜೆಟ್ ನಲ್ಲಿ 6ನೇ ಗ್ಯಾರಂಟಿಯನ್ನೂ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು: ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಗೋದಾವರಿ ರಾಜಾಪುರೆ ಮಾತನಾಡಿ, ಭರವಸೆ ಕೊಟ್ಟಂತೆ ನಮಗೆ 15 ಸಾವಿರ ವೇತನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಖಾಯಂ ಮಾಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಗ್ರಾಚ್ಯುಟಿ ಹಣ, ಪೆನ್‌ಷನ್ ಜಾರಿ ಮಾಡಬೇಕು. ಆರೋಗ್ಯ ವಿಮೆಯಾದ ಇ.ಎಸ್.ಐ. ಜಾರಿಗೊಳಿಸಬೇಕು. ಕಾಯಿಲೆಗಳಿಂದ ಬಳಲುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಂಬಳ ಸಹಿತ ರಜೆ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಇದನ್ನೂ ಓದಿ: 'ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು'