ಬೆಳಗಾವಿ: ನಗರಾಭಿವೃದ್ಧಿ ಪ್ರಾಧಿಕಾರದ ಸಭಾ ಭವನದಲ್ಲಿ ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಅಧ್ಯಕ್ಷತೆಯಲ್ಲಿ ಶಾಸಕರಾದ ಅನಿಲ ಬೆನಕೆ, ಅಭಯ್ ಪಾಟೀಲ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ನಗರದ ಅಭಿವೃದ್ಧಿಗೆ ಬೇಕಾದ ರೂಪರೇಷೆಗಳ ಕುರಿತಂತೆ ಹಲವು ಚರ್ಚೆಗಳನ್ನು ನಡೆಸಲಾಯಿತು.
ಸಭೆಯಲ್ಲಿ ಅಕ್ರಮ ಕಟ್ಟಣ ನಿರ್ಮಾಣ, ಹೊಸ ನಿವೇಶನಗಳ ಅಭಿವೃದ್ಧಿ, ನಗರ ಅಭಿವೃದ್ಧಿಗೆ ಯೋಜನೆಗಳ ರೂಪುರೇಷೆ ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಬಳಿಕ ಮಾತನಾಡಿದ ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಕಟ್ಟಡ ನಿರ್ಮಾಣದಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಹಲವು ಪ್ರಕರಣಗಳು ಬೆಳಗಾವಿಯಲ್ಲಿ ಹೇರಳವಾಗಿವೆ. ಇದಕ್ಕೆಲ್ಲ ಕೆಲವು ಸಡಿಲಿಕೆ ನೀಡಿ ಕಾನೂನು ಬದ್ಧಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸ್ಕೀಂ ನಂ. 61ರ ಪ್ರಕಾರ 23 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ಡಿ ಮತ್ತು ಸಿ ಗ್ರೂಪ್ ನೌಕರರಿಗಾಗಿ 3,700 ಮನೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸರ್ಕಾರದ ಮುಂದೆ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಇನ್ನು ಎಲ್ಲೆಲ್ಲಿ ಲೇಔಟ್ ಇಲ್ಲದೇ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದೆಯೋ ಅವುಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಸೂಚಿಸಲಾಗಿದೆ. ಲೇಔಟ್ ಇಲ್ಲದ ಪ್ರದೇಶಗಳಲ್ಲಿ ಸರ್ವೇಗೆ ಸೂಚನೆ ನೀಡಲಾಗಿದೆ. 2022ರ ವೇಳೆಗೆ ಎಲ್ಲರಿಗೂ ಸೂರು ಎನ್ನುವ ಪ್ರಧಾನಿ ಮೋದಿ ಕನಸು ನನಸು ಮಾಡಲು ಬುಡಾ ಸಿದ್ಧವಾಗಿದೆ ಎಂದರು.