ಬೆಳಗಾವಿ: ಶಾಸಕ ಅಭಯ್ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡದಿದ್ದಕ್ಕೆ ನನಗೆ ಅಸಮಾಧಾನವಿದೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಯ್ ಪಾಟೀಲ್ 5 ಬಾರಿ ಚುನಾವಣೆಗೆ ಸ್ಪರ್ಧಿಸಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಬೆಳಗಾವಿ ತಾಲೂಕಿನ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಶಾಸಕ ಅಭಯ್ ಪಾಟೀಲ್ ಸಚಿವ ಸ್ಥಾನಕ್ಕೆ ಸೂಕ್ತ.
ರಾಜ್ಯ ಸರ್ಕಾರ ಈ ಬಗ್ಗೆ ವಿಚಾರ ಮಾಡಬೇಕು. ಬಿಜೆಪಿಗೆ ಇತಿಹಾಸದಲ್ಲಿ ಸಿಗದ ಗೆಲುವು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಸಲ ಸಿಕ್ಕಿದೆ. ಅಭಯ್ ಪಾಟೀಲ್‌ಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ನನಗೆ ಅಸಮಾಧಾನವಿದೆ. ಈ ಕುರಿತು ಸಿಎಂ ಜೊತೆ ಮಾತನಾಡುತ್ತೇನೆ ಎಂದರು.
ಮರಾಠ ಸಮುದಾಯಕ್ಕೆ ಮೊದಲಿನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿತ್ತು. ಆದರೀಗ ಸಚಿವ ಸ್ಥಾನ ಕೈತಪ್ಪಿದೆ. ಹೀಗಾಗಿ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಮರಾಠ ಸಮುದಾಯಕ್ಕೆ ಅವಕಾಶ ಕೊಡಬೇಕು. ನನಗೆ ಸಚಿವ ಸ್ಥಾನ ಕೊಡುವಂತೆ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಮೂಡಲಗಿ ಬಳಿ ಕಾರು ಅಪಘಾತ: ಯುವಕರಿಬ್ಬರು ಸ್ಥಳದಲ್ಲೇ ಸಾವು