ಬೆಳಗಾವಿ: ಬಿಜೆಪಿ ಕಾರ್ಯಕರ್ತನ ಮೇಲೆ ಚಾಕು ಇರಿತ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಘಟನೆ ನಡೆದಿದೆ ಎಂಬ ಮಾಹಿತಿ ಇದೆ. ಪೊಲೀಸರು ತನಿಖೆ ಮಾಡಿ ಏನಾಗಿದೆ ಎಂದು ವರದಿ ನೀಡಲಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸುತ್ತಮುತ್ತಲಿನ ಸಿಸಿಟಿವಿ ಆಧರಿಸಿ ಮಾಹಿತಿ ನೀಡಲು ಸೂಚಿಸಿದ್ದೇನೆ. ಘಟನೆ ಆಗಿರೋದು ಗೊತ್ತಿರುವ ಹಿನ್ನೆಲೆ ಪರಿಶೀಲಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ. ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ ಎಂದರು.
ಘಟನೆ ನಡೆದಾಗ ಕಾರಿನಲ್ಲಿ ಚನ್ನರಾಜ ಹಟ್ಟಿಹೊಳಿ ಇದ್ದರು ಎಂಬ ವಿಚಾರಕ್ಕೆ, ಪೊಲೀಸರು ತನಿಖೆ ಮಾಡುತ್ತಿದ್ದಾರೆ, ವಾಹನ ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ. ವರದಿ ಹಾಗೂ ದಾಖಲೆಗಳು ಸಿಕ್ಕ ಬಳಿಕ ಮಾತನಾಡುತ್ತೇನೆ ಎಂದು ಹೇಳಿದರು.
ಬೆಳಗಾವಿ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂಬ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಯಿಸಿ, ಅವರು ಹಾಗೇ ಹೇಳುತ್ತಿರುತ್ತಾರೆ. ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದರೆ ಮತ್ತೆ ಯಾರ ಮೇಲೆ ನಂಬಿಕೆ ಇರುತ್ತದೆ. ಯಾರನ್ನಾದರೂ ನಂಬಬೇಕು ಅಲ್ಲವೇ. ನಮಗೆ ಬೇಕಾದಾಗ ನಂಬಿಕೆ ಇರುತ್ತದೆ. ನಮಗೆ ಬೇಡವಾದಾಗ ಇರುವುದಿಲ್ಲ. ಹಾಗೆ ನಡೆಯುವುದಿಲ್ಲ. ಪೊಲೀಸ್ ಇಲಾಖೆ ಎಲ್ಲರಿಗೂ ನ್ಯಾಯ ಒದಗಿಸುತ್ತದೆ ಎಂದು ತಿಳಿಸಿದರು.
ನಿನ್ನೆದಿನ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಎನ್ನುವವರ ಮೇಲೆ ಕೆಲವರು ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಜಯನಗರದ ಅವರ ಮನೆ ಮುಂದೆ ಐದಾರು ಜನರು ಏಕಾಏಕಿ ಬಂದು, ಹೊರಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪೃಥ್ವಿ ಸಿಂಗ್ ಅವರು ಕೆಲವರ ಜೊತೆಗೆ ಮಾತನಾಡುತ್ತಿರುವುದು ಅವರ ಮನೆ ಬಳಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಾಯಗೊಂಡ ತಕ್ಷಣ ಪೃಥ್ವಿ ಸಿಂಗ್ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಹಾಗೂ ಬೆಂಬಲಿಗರೇ ಈ ಘಟನೆಗೆ ಕಾರಣ ಎಂದು ಹಲ್ಲೆಗೊಳಗಾದ ಪೃಥ್ವಿ ಸಿಂಗ್ ಹಾಗೂ ಅವರ ಮಗ ಜಸ್ವೀರ್ ಸಿಂಗ್ ಆರೋಪ ಮಾಡಿದ್ದರು.
ಇದೇ ವಿಚಾರವಾಗಿ ನಿನ್ನೆ ಬಿಜೆಪಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪಕ್ಷದ ಮುಖಂಡನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಕೂಡಲೇ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ಬೀದಿಗಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಇದನ್ನೂ ಓದಿ: ರಮೇಶ ಜಾರಕಿಹೊಳಿ ಆಪ್ತನ ಮೇಲೆ ಹಲ್ಲೆ ಪ್ರಕರಣ: ಕೂಲಂಕಷ ತನಿಖೆ ಆಗಲಿ ಎಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್