ಬೆಳಗಾವಿ: ಅರಣ್ಯ ವ್ಯಾಪ್ತಿಯ ಫಾಲ್ಸ್ಗಳಿಗೆ ಸಾರ್ವಜನಿಕರ ಭೇಟಿ ನಿಷೇಧದ ನಡುವೆಯೂ ಹೆಸ್ಕಾಂ ಸಿಬ್ಬಂದಿ ಮತ್ತು ವೈದ್ಯರ ತಂಡ ಅಕ್ರಮವಾಗಿ ಭೇಟಿ ನೀಡಿ ಹುಚ್ಚಾಟ ಮೆರೆದು, ಎಣ್ಣೆ ಪಾರ್ಟಿ ನಡೆಸಿರುವ ಘಟನೆ ಖಾನಾಪುರ ತಾಲೂಕಿನ ಜಾಂಬೋಟಿ ಬಳಿಯ ಬಟವಡೆ ಫಾಲ್ಸ್ನಲ್ಲಿ ನಡೆದಿದೆ. ಅರಣ್ಯ ವ್ಯಾಪ್ತಿಯಲ್ಲಿ ಇರೋ ಫಾಲ್ಸ್ಗೆ ಅಕ್ರಮವಾಗಿ ಪ್ರವೇಶ ಮಾಡಿರುವ ಇವರು ಫಾಲ್ಸ್ ಮುಂಭಾಗದಲ್ಲಿ ಗ್ಯಾಸ್ ಬಳಸಿ ಅಡುಗೆ ಮಾಡಿ, ಎಣ್ಣೆ ಪಾರ್ಟಿ ಮಾಡಿದ್ದಾರೆ. ಫಾಲ್ಸ್ಗೆ ಹೆಸ್ಕಾಂ ಇಲಾಖೆಯ ವಾಹನದಲ್ಲಿ ಬಂದಿದ್ದ ವೈದ್ಯರು ಗುಂಡು, ತುಂಡು ಪಾರ್ಟಿ ಮಾಡಿದ್ದಾರೆ. ಹೆಸ್ಕಾಂ ಸಿಬ್ಬಂದಿ ಹಾಗೂ ವೈದ್ಯರು ಫಾಲ್ಸ್ ಬಳಿ ಪಾರ್ಟಿ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು.
ಅರಣ್ಯ ಪ್ರದೇಶದ ಫಾಲ್ಸ್ಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಜುಲೈ 26ರಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಮಾಡಿದ್ದರು. ಹಾಗಾಗಿ ಪೊಲೀಸ್ ಇಲಾಖೆಯಿಂದ ಜಾಂಬೋಟಿ ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಆದರೂ ಪೊಲೀಸರನ್ನು ಯಾಮಾರಿಸಿ ಸರ್ಕಾರಿ ವಾಹನ ಬಳಸಿ ಅರಣ್ಯ ಪ್ರದೇಶಕ್ಕೆ ವೈದ್ಯರು, ಹೆಸ್ಕಾಂ ಸಿಬ್ಬಂದಿ ಗ್ಯಾಂಗ್ ತೆರಳಿತ್ತು. ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಎಣ್ಣೆ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವೈದ್ಯ ಸೇರಿ ನಾಲ್ಕು ಜನರ ವಿರುದ್ಧ ಕೇಸ್ ದಾಖಲಾಗಿದೆ. ನಿರ್ಬಂಧ ಪ್ರದೇಶದಲ್ಲಿ ಅಕ್ರಮ ಪ್ರವೇಶ ಹಿನ್ನೆಲೆಯಲ್ಲಿ ವೈಲ್ಡ್ ಲೈಫ್ ಆಕ್ಟ್ 7 ಅಡಿಯಲ್ಲಿ ಜಾಂಬೋಟಿ ವಲಯ ಅರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾಲಿಟ್ಟಲ್ಲೆಲ್ಲ ಮದ್ಯದ ಬಾಟಲ್, ಕಣ್ಣು ಹಾಯಿಸಿದಲ್ಲೆಲ್ಲ ಕಸದ ರಾಶಿ: ಸೊರಗಿದ ಆಗುಂಬೆ
ಗ್ಯಾಸ್ ಸ್ಟೋ, ಅಡುಗೆ ಸಾಮಗ್ರಿಗಳನ್ನು ಅರಣ್ಯಾಧಿಕಾರಿಗಳು ಸೀಜ್ ಮಾಡಿದ್ದಾರೆ. ಇನ್ನು ಹೆಸ್ಕಾಂ ಅಧಿಕಾರಿಗಳನ್ನು ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಉಳಿದ ನಾಲ್ವರು ಸಿಬ್ಬಂದಿ ವಿರುದ್ಧವೂ ದೂರು ದಾಖಲಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ನಿರ್ಬಂಧನೆಯನ್ನು ಉಲ್ಲಂಘಿಸಿ ಬಟವಡೆ ಫಾಲ್ಸ್ ಬಳಿ ಅರಣ್ಯ ಪ್ರದೇಶದಲ್ಲಿ ಮೋಜು ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎನ್ನಲಾದ ಉಳಿದ ನಾಲ್ವರು ಹೆಸ್ಕಾಂ ಸಿಬ್ಬಂದಿ ವಿರುದ್ಧವೂ ದೂರು ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ: ಕಾಲುವೆಯಲ್ಲಿ ಕುಳಿತು ಎಣ್ಣೆ ಪಾರ್ಟಿ, ನೀರು ಬಂದಾಗ ಫಜೀತಿ- ವಿಡಿಯೋ