ಚಿಕ್ಕೋಡಿ: ಐದು ಅಡಿ ಆಳಕ್ಕೆ ರಸ್ತೆ ಕುಸಿದ ಪರಿಣಾಮ ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಾಯಬಾಗ ತಾಲೂಕಿನ ಜಲಾಲಪುರ ದಾರಿಯನ್ನು ಬಂದ್ ಮಾಡಲಾಗಿದೆ.
ಚಿಕ್ಕೋಡಿ ತಾಲೂಕಿನ ಅಂಕಲಿ, ಬಾವನ ಸೌಂದತ್ತಿ, ದಿಗ್ಗೇವಾಡಿ, ಜಲಾಲಪುರ ಸೇರಿ ಚಿಂಚಲಿ ಗ್ರಾಮಗಳನ್ನು ಸಂಪರ್ಕಿಸುವ ಮಾರ್ಗ ಕುಸಿತವಾಗಿದೆ. ಸುಮಾರು ಐದು ಅಡಿ ಆಳ ಕುಸಿದಿರುವ ಹಿನ್ನೆಲೆ ವಾಹನ ಸವಾರರು ಗಮ್ಯ ಸೇರಲು ಪರದಾಡುತ್ತಿದ್ದಾರೆ. ಸದ್ಯ ನಾಲ್ಕು ಚಕ್ರ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಗ್ರಾಮಸ್ಥರು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ಈ ವಿಷಯ ತಂದರೂ ಯಾರೂ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರಸ್ತೆ ಕುಸಿದ ಜಾಗದಲ್ಲಿ ನಾಲ್ಕೈದು ಅಪಘಾತ ಸಂಭವಿಸಿವೆ. ಜಲಾಲಪುರದಿಂದ ಹಳೇ ದಿಗ್ಗೇವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಗುತ್ತಿಗೆದಾರರು ಮಾಡಿರುವ ಕಳಪೆ ಕಾಮಗಾರಿಯಿಂದ ಭಾರೀ ಮಳೆಗೆ ಕತ್ತರಿಸಿ ಬಿದ್ದು, ಸಂಚಾರಕ್ಕೆ ಸಂಚಕಾರ ತಂದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.