ಗೋಕಾಕ್: ತರಕಾರಿ, ಹಣ್ಣು ಮಾರಾಟಗಾರರಿಗೆ ನಗರದ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬೀದಿ ಬದಿಯ ವ್ಯಾಪಾರಸ್ಥರು ತಾಲೂಕಿನ ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ಪುರಸಭೆ ಕಚೇರಿಗೆ ಆಗಮಿಸಿದ ಬೀದಿ ಬದಿಯ ವ್ಯಾಪಾರಸ್ಥರು ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕೊರೊನಾ ವೈರಸ್ ಹಿನ್ನೆಲೆ ಬೀದಿ ಬದಿಯ ವ್ಯಾಪಾರಸ್ಥರು ಜೀವನ ನಡೆಸುವುದೇ ಕಷ್ಟವಾಗಿರುವಂತಹ ಈ ಸಂದರ್ಭದಲ್ಲಿ ಪೊಲೀಸರು ಅವರ ವ್ಯಾಪಾರಕ್ಕೆ ಸಹಕಾರ ನೀಡಬೇಕು. ಅದನ್ನು ಬಿಟ್ಟು ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಬೀದಿ ಬದಿಯ ವ್ಯಾಪಾರಸ್ಥರಿಗೆ ತೊಂದರೆ ನೀಡದಂತೆ ಜಿಲ್ಲಾಡಳಿತ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಈ ನಡುವೆ ವ್ಯಾಪಾರಸ್ಥರು ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದು ಕಂಡುಬಂತು.