ಅಥಣಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ವಕ್ಷೇತ್ರವಾದ ಅಥಣಿ ಪಟ್ಟಣದ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು, ಕೆಲವು ಚಾಲಕರು ಹಾಗೂ ವಾಹನಗಳನ್ನು ಗುರಿಯಾಗಿಸಿ ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಟಿಪ್ಪರ್ ಮಾಲೀಕರ ಸಂಘದ ಮುಖಂಡರು ಆರೋಪಿಸಿದ್ದಾರೆ.
ಓದಿ: ಸದನದಲ್ಲಿ ಶರ್ಟ್ ಬಿಚ್ಚಿ ಅಶಿಸ್ತು: ಒಂದು ವಾರಗಳ ಕಾಲ ಶಾಸಕ ಸಂಗಮೇಶ್ ಅಮಾನತು
ಕಳೆದ ಒಂದು ವರ್ಷದಿಂದ ಅಥಣಿ ಪಟ್ಟಣದಲ್ಲಿ ನೂತನ ಆರ್ಟಿಓ ಕಚೇರಿ ಆರಂಭಗೊಂಡಿದೆ. ಇದರ ಮಧ್ಯೆ ಕೆಲವು ಅಧಿಕಾರಿಗಳು ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಟಿಪ್ಪರ್ ಚಾಲಕರು-ಮಾಲೀಕರು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ.
ಈ ವಿಚಾರವಾಗಿ ಪಟ್ಟಣದ ಶಿವಾಜಿ ವೃತ್ತದ ಸಮೀಪದಲ್ಲಿಯೇ ನೂರಾರು ಟಿಪ್ಪರ್ ಗಳನ್ನು ನಿಲ್ಲಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ 'ಈಟಿವಿ ಭಾರತ' ಜೊತೆ ಟಿಪ್ಪರ್ ಸಂಘದ ಮುಖಂಡರಾದ ಬಾಹುಬಲಿ ಮಾಲಗಾಂವಿ ಮತ್ತು ಗುರುನಾಥ್ ಪಾಟೀಲ್ ಮಾತನಾಡಿದರು. ತಿಂಗಳಿಂದ ಅಥಣಿ ಆರ್ಟಿಓ ಅಧಿಕಾರಿಗಳು ಒಂದು ಟಿಪ್ಪರ್ ಲಾರಿಗೆ ತಿಂಗಳಿಗೆ 2000 ರೂಪಾಯಿ ಹಫ್ತಾ ನೀಡುವಂತೆ ಹೇಳುತ್ತಿದ್ದಾರೆ. ನಿರಾಕರಿಸಿದರೆ 70 ಸಾವಿರ ರೂಪಾಯಿ ದಂಡವನ್ನು ವಿಧಿಸುತ್ತಿದ್ದಾರೆ. ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ. ಸಚಿವ ಲಕ್ಷ್ಮಣ ಸವದಿ ಹಾಗೂ ಸ್ಥಳೀಯ ಶಾಸಕ ಮಹೇಶ್ ಕುಮಟಳ್ಳಿ ಅವರ ಗಮನಕ್ಕೆ ತಂದರು ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.