ಬೆಂಗಳೂರು/ಬೆಳಗಾವಿ: 8 ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡುತ್ತಿದ್ದಂತೆ ಬೆಂಗಳೂರಿನ ಇಂದಿರಾನಗರದಲ್ಲಿರುವ ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯನ್ನು ಪುನರಾರಂಭ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷಚೇತನ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿಂದು ಜೆಡಿಎಸ್ ಸದಸ್ಯರಾದ ಸಿ.ಎನ್.ಮಂಜೇಗೌಡ ಮತ್ತು ತಿಪ್ಪೇಸ್ವಾಮಿ ಅವರ ಹಂಸಧ್ವನಿ ಶಾಲೆ ಆರಂಭದ ಕುರಿತು ಸರ್ಕಾರದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆ ಪ್ರಾರಂಭ ಮಾಡಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. 2019ರಿಂದ ಈ ಸಂಸ್ಥೆಯನ್ನು ಸರ್ಕಾರ ವಶಕ್ಕೆ ಪಡೆದ ನಂತರ, ಕಟ್ಟಡ ದುರಸ್ತಿ, ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡುತ್ತಿದೆ. 8 ಹೆಚ್ಚುವರಿ ಹುದ್ದೆಗಳನ್ನು ಮಂಜೂರು ಮಾಡಿಸುವ ಪ್ರಯತ್ನ ಮಾಡಲಾಗಿದೆ.
2020ರಿಂದ ಕೋವಿಡ್ ಬಂದ ನಂತರ ಮಂದಗತಿಯಿಂದ ಅನುಷ್ಟಾನವಾಗುತ್ತಿದೆ. ಆದರೆ ಇಲಾಖೆ ಬಹಳ ಗಂಭೀರವಾಗಿ ಇದನ್ನು ಪರಿಗಣಿಸಿದೆ. ಹಣಕಾಸು ಇಲಾಖೆ 10 ಕ್ವಾರಿ ಹಾಕಿ ಕಡತ ವಾಪಸ್ ಕಳಿಸಿತ್ತು, ಅದಕ್ಕೆ ಸ್ಪಷ್ಟೀಕರಣ ನೀಡಿದ್ದೇವೆ. 8 ಹೆಚ್ಚುವರಿ ಹುದ್ದೆ ಮಂಜೂರು ಮಾಡುತ್ತಿದ್ದಂತೆ ಹಂಸಧ್ವನಿ ಶಾಲೆ ಪುನರಾರಂಭ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಚಿವರ ಉತ್ತರಕ್ಕೆ ತೃಪ್ತರಾಗದ ಸದಸ್ಯ ತಿಪ್ಪೇಸ್ವಾಮಿ, ಇಂದಿರಾನಗರದಲ್ಲಿ 2.14 ಎಕರೆ ವಿಸ್ತೀರ್ಣದಲ್ಲಿರುವ ಶಾಲೆಯಲ್ಲಿ ಎಲ್ಲ ವ್ಯವಸ್ಥೆ ಇದೆ. ಈ ವಸತಿ ಶಾಲೆಯಲ್ಲಿ ಹಣ್ಣು ಗಂಡು ಮಕ್ಕಳಿದ್ದಾರೆ. ಎಲ್ಲ, ಜಾತಿ ಧರ್ಮ ವರ್ಗದವರಿದ್ದಾರೆ. ಇದಕ್ಕೆ ವಿಶೇಷ ಮಹತ್ವ ಇದ್ದು, ಈ ಅನುದಾನಿತ ಶಾಲೆಯನ್ನು ವಸತಿ ಶಾಲೆಯನ್ನಾಗಿ ಮಾಡಿ ಎನ್ನುತ್ತಿದ್ದೇವೆ. ಕೂಡಲೇ ವಸತಿ ಶಾಲೆಯನ್ನಾಗಿ ಆರಂಭ ಮಾಡಿ ಎಂದು ಮನವಿ ಮಾಡಿದರು.
ಇದಕ್ಕೆ ದನಿಗೂಡಿಸದ ಜೆಡಿಎಸ್ ಸಭಾನಾಯಕ ಬೋಜೇಗೌಡ, ಜಿಲ್ಲೆಗೊಂದು ಇಂತಹ ಶಾಲೆ ಮಾಡಬೇಕು. ಹಂಸಧ್ವನಿ ಶಾಲೆಗೆ ಆರ್ಥಿಕ ಇಲಾಖೆ ಕೂಡಲೇ ಹುದ್ದೆ ಮುಂಜೂರಾತಿ ಮಾಡಿ, ತಡಮಾಡದೆ ಅನುಮತಿ ನೀಡಬೇಕು ಎಂದರು. ಬಿಜೆಪಿ ಹಾಗು ಜೆಡಿಎಸ್‌ನ ಹಲವು ಸದಸ್ಯರು ದನಿಗೂಡಿಸಿದರು.
ಸದಸ್ಯರ ಅಭಿಪ್ರಾಯ ಆಲಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಇಂತಹ ಕೆಲಸ ಮಾಡಲು ನಾವು ಮುಂದಾದಾಗ ಆರ್ಥಿಕ ಇಲಾಖೆಯ ಜೊತೆಗಿನ ಪತ್ರ ವ್ಯವಹಾರ ಕಡತ ತರಿಸಿಕೊಳ್ಳುವುದು, ಕಳುಹಿಸುವುದಕ್ಕೆ ಸಾಕಷ್ಟು ಸಮಯವಾಗಲಿದೆ. ಆದರೂ ನಾನು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದೇನೆ. ಆದಷ್ಟು ಬೇಗ ಹಂಸಧ್ವನಿ ಶಾಲೆ ಆರಂಭಕ್ಕೆ ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ವಿಶೇಷಚೇತನರ ಮಾಸಾಶನ ಹೆಚ್ಚಳದ ಬೇಡಿಕೆ ಇತ್ತು. ಈ ಬಗ್ಗೆ ಪ್ರಯತ್ನ ಮಾಡಿದ್ದೆ, ಆದರೆ ಅದು ಆಗಲಿಲ್ಲ. ಹಾಗಂತ ನಾನು ಸುಮ್ಮನೆ ಕೂರಲ್ಲ. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಿದ್ದೇನೆ. ಯತ್ನ ಮಾಡುವುದು,ಕನಸು ಕಾಣುವುದನ್ನು ನಾನು ಬಿಡಲ್ಲ, ಅದಕ್ಕೆ ನಾನು ಇಲ್ಲಿದ್ದೇನೆ ಎಂದು ಲಕ್ಷ್ಮಿ ಸಚಿವ ಸ್ಥಾನದವರೆಗೆ ತಾವು ಬೆಳೆದುಬಂದಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.
ಬೆಳೆ ಪರಿಹಾರ ವಿತರಣೆ ವಿಚಾರ: ಬೆಳೆ ಪರಿಹಾರ ವಿತರಣೆಗೆ ಕೇಂದ್ರ ಸರ್ಕಾರ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಹಾಗಾಗಿ ತಾತ್ಕಾಲಿಕವಾಗಿ ರಾಜ್ಯ ಸರ್ಕಾರ ಬೆಳೆ ನಷ್ಟಕ್ಕೊಳಗಾದ ರೈತರ ಖಾತೆಗಳಿಗೆ 2 ಸಾವಿರ ಪರಿಹಾರದ ಹಣ ಜಮೆ ಮಾಡಲಿದ್ದು, ಎನ್ಡಿಆರ್ಎಫ್ನಿಂದ ಮಂಜೂರಾತಿ ಸಿಗುತ್ತಿದ್ದಂತೆ ಬೆಳ ನಷ್ಟ ಪರಿಹಾರವನ್ನು ನಿಯಮಾನುಸಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸದಸ್ಯ ಗೋವಿಂದರಾಜು ರಾಜ್ಯದಲ್ಲಿ ಬರ ಸ್ಥಿತಿ ಹಾಗು ಪರಿಹಾರ ಕುರಿತು ಎತ್ತಿದ ಸರ್ಕಾರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ 223 ತಾಲ್ಲೂಕು ಬರ ತಾಲ್ಲೂಕು ಎಂದು ಘೋಷಿಸಲಾಗಿದೆ. ಸಮೀಕ್ಷೆ ನಡೆಸಿ ಎಲ್ಲ ಮಾಹಿತಿ ಪಡೆದು ಉಪ ಸಮಿತಿಯಲ್ಲಿ ಚರ್ಚಿಸಿ ಕೇಂದ್ರಕ್ಕೆ ಬರತಾಲ್ಲೂಕು ಶಿಫಾರಸ್ಸು ಕಳಿಸಿದ್ದೇವೆ. 46.11 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಇನ್‌ಪುಟ್ ಸಬ್ಸಿಡಿ ನೀಡುವ ಕುರಿತು ಕೇಂದ್ರಕ್ಕೆ ಬರೆಯಲಾಗಿದೆ. ಕೇಂದ್ರದಿಂದ ಇನ್ನು ಸ್ಪಷ್ಟ ಮಾಹಿತಿ ಬಂದಿಲ್ಲ. ಆದರೂ ತಾತ್ಕಾಲಿಕವಾಗಿ ರಾಜ್ಯ ಸರ್ಕಾರ ರೈತರ ಖಾತೆಗೆ ಹಣ ಪಾವತಿಸಲು ಕ್ರಮವಹಿಸಲಾಗಿದೆ.
ಬೆಳೆ ಪರಿಹಾರ ಮಾತ್ರ ಕೇಂದ್ರದಿಂದ ಅನುಮತಿ ತಡವಾಗಿದೆ. ಹಾಗಾಗಿ ಸದ್ಯಕ್ಕೆ ತಾತ್ಕಾಲಿಕವಾಗಿ ರಾಜ್ಯ ಸರ್ಕಾರದಿಂದಲೇ ಎರಡು ಸಾವಿರ ಹಣವನ್ನು ನಾವು ಕೊಡುತ್ತಿದ್ದೇವೆ. ಕೇಂದ್ರದ ಹಣಕಾಸು ಸಚಿವರ ಭೇಟಿ ಮಾಡಿ ಎಲ್ಲ ವಿವರಣೆ ಮಾಡುವ ಕೆಲಸ ಮಾಡಿದ್ದೇವೆ. ಉನ್ನತ ಮಟ್ಟದ ಸಮಿತಿ ಇದೆ. ಈ ವಾರದಲ್ಲಿ ಕೇಂದ್ರ ಸರ್ಕಾರದ ಸಂದೇಶದ ನಿರೀಕ್ಷೆಯಲ್ಲಿದ್ದೇವೆ. ಕಂದಾಯ, ಕೃಷಿ, ತೋಟಗಾರಿಕೆ ಮೂರು ಸೇರಿ ಕೆಲಸ ಮಾಡಲಾಗುತ್ತದೆ. ಮುಂದೆ ಯಾವುದೇ ಪರಿಹಾರ ಕೊಡಬೇಕಾದಾಗ ನೇರವಾಗಿ ಡಿಬಿಟಿ ಮೂಲಕ ಹಣ ಹೋಗಲು ವ್ಯವಸ್ಥೆ ತಂದಿದೆ. ಸದ್ಯ 2 ಸಾವಿರ ತಾತ್ಕಾಲಿಕ ಪರಿಹಾರ ಮಾತ್ರ ನೀಡಲಿದ್ದು, ಎನ್ಡಿಆರ್ಎಫ್ ಒಪ್ಪಿಗೆ ಕೊಡುತ್ತಿದ್ದಂತೆ ಅಗತ್ಯ ಪರಿಹಾರ ಕೊಡಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಆಡಳಿತ-ಪ್ರತಿಪಕ್ಷ ನಾಯಕರ ಗದ್ದಲ; ಪರಿಸ್ಥಿತಿ ತಿಳಿಗೊಳಿಸಿದ ಸಭಾಪತಿ ಹೊರಟ್ಟಿ