ದ್ರಾಕ್ಷಿ ಬೆಳೆದರೂ ಕಹಿ ತಪ್ಪಲಿಲ್ಲ.. ಭಾರಿ ಗಾಳಿ-ಮಳೆಗೆ ಸಂಪೂರ್ಣ ಬೆಳೆ ಮಣ್ಣುಪಾಲು - ರೈತ
ನಿನ್ನೆ ಬಿದ್ದ ವರ್ಷದ ಮೊದಲ ಮಳೆಯಿಂದ ಭಾರಿ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆ ಹಾಳಾಗಿದ್ದು ರೈತ ಕಂಗಾಲಾಗಿದ್ದಾನೆ. ಅಥಣಿ ತಾಲೂಕಿನ ಕೆಲ ಹಳ್ಳಿಗಳ ಜೀವನಾಡಿಯಾದ ದ್ರಾಕ್ಷಿ ಬೆಳೆ ಮಳೆಯಿಂದ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ.
ಚಿಕ್ಕೋಡಿ: ನಾಲ್ಕು ತಿಂಗಳು ಮೈಮೇಲಿನ ಬೆವರನ್ನು ನೀರಿನ ಹಾಗೆ ಹರಿಸಿ ದ್ರಾಕ್ಷಿ ಬೆಳೆ ಬೆಳೆದು ಇನ್ನೇನು ಲಾಭದ ಮುಖ ನೋಡಬೇಕು ಅನ್ನುವಷ್ಟರಲ್ಲಿ ಕಂಡ ಕನಸುಗಳು ನುಚ್ಚು ನೂರಾಗಿ, ಗಾಳಿ-ಮಳೆಗೆ ಬೆಳೆ ತೂರಿ ಹೋಗಿವೆ.
ನಿನ್ನೆ ಬಿದ್ದ ವರ್ಷದ ಮೊದಲ ಮಳೆಯಿಂದ ಭಾರಿ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆ ಹಾಳಾಗಿದ್ದು ರೈತ ಕಂಗಾಲಾಗಿದ್ದಾನೆ. ಅಥಣಿ ತಾಲೂಕಿನ ಕೆಲ ಹಳ್ಳಿಗಳ ಜೀವನಾಡಿಯಾದ ದ್ರಾಕ್ಷಿ ಬೆಳೆ ಮಳೆಯಿಂದ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಕಿತ್ತು ಬಿದ್ದಿರುವ ಒಣ ದ್ರಾಕ್ಷಿ ಶೆಡ್ಡುಗಳು, ಅಲ್ಲಲ್ಲಿ ನೆಲಕಂಡಿರುವ ಒಣ ದ್ರಾಕ್ಷಿಗಳು, ಇದನ್ನೆಲ್ಲ ನೋಡುತ್ತ ನಿಂತಿರುವ ರೈತರು, ಈ ದೃಶ್ಯ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಡಹಳ್ಳಿ, ಕೊಹಳ್ಳಿ, ಬಡಚಿ, ಯಲಿಹಡಲಗಿ ಗ್ರಾಮಗಳಲ್ಲಿ ಸಾಮಾನ್ಯವಾಗಿದೆ.
ಒಣ ಬೇಸಾಯಕ್ಕೆ ಹೆಸರಾಗಿರುವ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪೂರ್ವ ಭಾಗದಲ್ಲಿ ಹೆಚ್ಚಾಗಿ ರೈತರು ದ್ರಾಕ್ಷಿ ಬೆಳೆಯನ್ನೇ ನಂಬಿಕೊಂಡಿದ್ದಾರೆ. ಕೈಗೆ ಬಂದ ದ್ರಾಕ್ಷಿಯನ್ನು ಒಣಗಿಸಿ, ಒಣ ದ್ರಾಕ್ಷಿ ಮಾಡಿ ಕೈ ತುಂಬ ಲಾಭ ಪಡೆಯುವ ಉದ್ದೇಶ ಹೊಂದಿದ್ದ ರೈತರು ಅಡಹಳ್ಳಿ ಗ್ರಾಮದ ಹೊರವಲಯದಲ್ಲಿ ಸುಮಾರು 50 ಕ್ಕೂ ಹೆಚ್ಚು ಶೆಡ್ಗಳನ್ನು ನಿರ್ಮಾಣ ಮಾಡಿ ಅವುಗಳಲ್ಲಿ ದ್ರಾಕ್ಷಿ ಒಣಗಿಸುವ ಕಾಯಕದಲ್ಲಿ ತೊಡಗಿದ್ದರು. ಆದರೆ, ನಿನ್ನೆ ಸಂಜೆ ಬೀಸಿದ ಭಾರಿ ಬಿರುಗಾಳಿಗೆ ಇಲ್ಲಿನ ರೈತರ ಕನಸು ನುಚ್ಚು ನೂರಾಗಿ ಹೋಗಿವೆ.
ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತರು ಕಂಗಾಲಾಗಿದ್ದಾರೆ. ಈ ಭಾಗದಲ್ಲಿ ರೈತರು ದ್ರಾಕ್ಷಿ ಬೆಳೆಯೋದು ಅಷ್ಟು ಸುಲಭವಲ್ಲ. ಯಾಕೆಂದರೆ, ಇಲ್ಲಿ ಕಾಲ ಕಾಲಕ್ಕೆ ಮಳೆಯಾಗೋದಿಲ್ಲ. ಕಾಲುವೆ ಇದ್ದರೂ ಸಹ ಕಾಲುವೆಗೆ ಬೇಕಾದ ಸಮಯದಲ್ಲಿ ನೀರು ಬರೋದೆ ಇಲ್ಲ. ಹೀಗಾಗಿ ಇಲ್ಲಿನ ರೈತರು ಸುಮಾರು 20 ರಿಂದ 30 ಕಿಲೋ ಮೀಟರ್ ದೂರದಿಂದ ಬಾಡಿಗೆ ರೂಪದಲ್ಲಿ ನೀರು ಪಡೆದು ತಮ್ಮ ದ್ರಾಕ್ಷಿ ಬೆಳೆಗಳನ್ನ ಬೆಳೆಸ್ತಾರೆ. ಅಷ್ಟು ಕಷ್ಟ ಪಟ್ಟು ದ್ರಾಕ್ಷಿ ಬೆಳೆದು ಇನ್ನೇನು ಲಾಭದ ನಿರೀಕ್ಷೆ ಮಾಡುವಾಗ ಅಕಾಲಿಕ ಮಳೆ-ಗಾಳಿ ರೈತರ ಬದುಕನ್ನು ಚಿಂತಾಜನಕವಾಗಿಸಿದೆ.
ಸಾಲ ಮಾಡಿ ಬೆಳೆದು, ಬಂದ ಲಾಭದಲ್ಲಿ ನೆಮ್ಮದಿ ಕಾಣಬೇಕು ಎಂಬ ಹೊತ್ತಲ್ಲಿ ಅಕಾಲಿಕ ಮಳೆ ಮತ್ತು ಬಿರುಗಾಳಿ ರೈತರ ಬದುಕಲ್ಲಿ ಆಟವಾಡಿದೆ. ಹೀಗಾಗಿ ರೈತರು ಸದ್ಯ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಬೆಳೆ ಪರಿಹಾರ ನಿಧಿಯಾದ್ರೂ ಸರ್ಕಾರ ಮತ್ತು ಅಧಿಕಾರಿಗಳು ಸರಿಯಾಗಿ ಕೊಡ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.