ಬೆಳಗಾವಿ: ಹೃದಯಾಘಾತದಿಂದ ನಿಧನರಾಗಿದ್ದ ಗೋಕಾಕ್ ತಾಲೂಕಿನ ಮೇಲ್ಮಟ್ಟಿಯ ಯೋಧನ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮದಲ್ಲಿ ನೆರವೇರಿಸಲಾಯಿತು. ಯೋಧನ ಅಕಾಲಿಕ ಅಗಲಿಕೆಯಿಂದ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮೇಲ್ಮಟ್ಟಿ ಗ್ರಾಮದ ಯೋಧ ಶಂಕರ್ ಬಾಳಪ್ಪ ಯಲಿಗಾರ (33) ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಶಂಕರ್ ಕಳೆದ 13 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ಬೆಳಗ್ಗೆ ಪಾರ್ಥಿವ ಶರೀರ ಸ್ವಗ್ರಾಮ ಮೇಲ್ಮಟ್ಟಿಗೆ ಆಗಮಿಸಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ್ ಬಿ.ನಂದಗಾವಿ ಹಾಗೂ ಡಿಎಆರ್ ಎಸ್ಪಿ ವೈ.ಕೆ.ಕಾಶಪ್ಪನವರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಮಂದಿ ಅಗಲಿದ ಸೈನಿಕನಿಗೆ ಅಂತಿಮ ನಮನ ಸಲ್ಲಿಸಿದರು. ಯೋಧನ ಸಾವಿಗೆ ಇಡೀ ಗ್ರಾಮವೇ ಕಣ್ಣೀರಿಟ್ಟಿತು. ಮಕ್ಕಳು, ಮಹಿಳೆಯರು ಕೂಡ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: 38 ವರ್ಷಗಳ ಬಳಿಕ ಪತ್ತೆಯಾದ ಯೋಧನ ಮೃತದೇಹದ ಅಂತ್ಯಕ್ರಿಯೆ: ಪುತ್ರಿಯರಿಂದ ಅಗ್ನಿಸ್ಪರ್ಶ
ತಾಲೂಕು ಆಡಳಿತದಿಂದ ಗ್ರಾಮದ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಶಂಕರ ಯಲಿಗಾರ ಅಂತ್ಯಸಂಸ್ಕಾರ ನಡೆಸಲಾಯಿತು. ಈ ವೇಳೆ ಯೋಧನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.