ಬೆಳಗಾವಿ/ ಬೆಂಗಳೂರು : ಆಹಾರ ಭದ್ರತೆಯಡಿ ಪಡಿತರದಾರರಿಗೆ ಕೇಂದ್ರದ 5 ಕೆ ಜಿ ಆಹಾರ ಧಾನ್ಯ ವಿತರಣೆ ಜೊತೆ ರಾಜ್ಯದಿಂದ ಪೂರೈಸಬೇಕಿದ್ದ 5 ಕೆ ಜಿ ಅಕ್ಕಿ ಬದಲು ನೀಡಲಾಗುತ್ತಿರುವ ಹಣವನ್ನು ಹೆಚ್ಚು ಮಾಡುವುದಿಲ್ಲ. ಕೇಂದ್ರ ಆಹಾರ ನಿಗಮ ನಿಗದಿಪಡಿಸಿದ ಹಣವನ್ನೇ ನಾವು ಫಲಾನುಭವಿಗಳ ಖಾತೆಗೆ ನೀಡುತ್ತಿದ್ದೇವೆ. ಆದಷ್ಟು ಬೇಗ ಹಣದ ಬದಲು ಅಕ್ಕಿಯನ್ನೇ ವಿತರಿಸಲು ಕ್ರಮ ವಹಿಸಲಾಗುತ್ತದೆ ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಅವರು ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕೇಶವಪ್ರಸಾದ್ ಬದಲು ತಳವಾರ ಸಾಬಣ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರದಿಂದ ಪಡಿತರದಾರರಿಗೆ ನೀಡುತ್ತಿದ್ದ 5 ಕೆಜಿ ಅಕ್ಕಿ, ರಾಜ್ಯದಿಂದ ನೀಡಬೇಕಿದ್ದ 5 ಕೆಜಿ ಅಕ್ಕಿ ಬದಲು ತಲಾ ಕೆಜಿಗೆ 34 ರೂ. ನೀಡಲಾಗುತ್ತಿದೆ. ಆಹಾರ ನಿಗಮ ನಿಗದಿಪಡಿಸಿದ ಹಣವನ್ನೇ ನಾವು ಕೊಡುತ್ತಿದ್ದೇವೆ. ಅದನ್ನು ಮಾರುಕಟ್ಟೆ ದರದಲ್ಲಿ ಅಕ್ಕಿ ದರ ಹೆಚ್ಚಿದೆ ಎನ್ನುವ ಕಾರಣಕ್ಕೆ ನಾವು ಹೆಚ್ಚು ಮಾಡಲು ಸಾಧ್ಯವಿಲ್ಲ. ಆದರೂ ನಾವು ಹಣದ ಬದಲು ಅಕ್ಕಿಯನ್ನೇ ನೀಡಲು ಚಿಂತನೆ ಮಾಡಿದ್ದೇವೆ. ಕೇಂದ್ರದ ಜೊತೆ ಮಾತುಕತೆ ನಡೆಸುತ್ತಿದ್ದು, ಅಕ್ಕಿ ದರ ಕಡಿತಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಹೊಸ ಪಡಿತರ ಕಾರ್ಡ್ಗಳ ವಿತರಣೆಗೆ ಸರ್ವರ್ ಸಮಸ್ಯೆ ಇದೆ. ಆದರೆ ಅದನ್ನು ಪರಿಹರಿಸುವ ಕಾರ್ಯ ಬಹುತೇಕ ಸಫಲವಾಗಿದೆ. ಒಂದು ತಿಂಗಳಿನಿಂದ ಸಮಸ್ಯೆ ಕಡಿಮೆಯಾಗಿದೆ. ಅಲ್ಪ ಸಮಸ್ಯೆ ಮಾತ್ರ ಉಳಿದಿದೆ. ಅದನ್ನೂ ಆದಷ್ಟು ಶೀಘ್ರ ಸರಿಪಡಿಸಲಾಗುತ್ತದೆ. ಕಳೆದ ಸರ್ಕಾರದ ವೇಳೆಯಲ್ಲಿಯೇ 2.95 ಲಕ್ಷ ಕಾರ್ಡ್ಗಳ ಅರ್ಜಿ ಬಂದಿತ್ತು. ಪರಿಶೀಲನೆ ನಡೆಸಿ ವಿತರಣೆ ಮಾಡುವ ಕೆಲಸ ಆರಂಭಿಸಿದ್ದೇವೆ. ಎಪಿಎಲ್, ಬಿಪಿಎಲ್ ಎಂದು ವಿತರಿಸಿದ ನಂತರವೇ ಹೊಸದಾಗಿ ಮತ್ತೆ ಪಡಿತರ ಕಾರ್ಡ್ ಕೊಡುವ ಬಗ್ಗೆ ಯೋಚಿಸಲಿದ್ದೇವೆ ಎಂದರು.
ದಾಸ್ತಾನು ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಿದ್ದೇವೆ. ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ರಚಿಸಿ ಎಲ್ಲಾ ದಾಸ್ತಾನು ತನಿಖೆ ನಡೆಸಿದ್ದೇವೆ. ಎರಡು ಮತ್ತು ಮೂರು ಜಾಗದಲ್ಲಿ ಗಂಭೀರವಾದ ವಿಚಾರವಾಗಿದೆ. ಟಿಎಪಿಎಂಸಿ ಜವಾಬ್ದಾರಿಯಲ್ಲಿ ನಡೆಯುತ್ತಿದ್ದರೂ ಅಕ್ರಮ ನಡೆದ ಹಿನ್ನೆಲೆ ಡಿಸಿ ತಕ್ಷಣ ಕ್ರಮ ವಹಿಸಿ, ಹಣ ಮುಟ್ಟುಗೋಲು ಹಾಕಿ, ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆಗೆ ಆದೇಶಿಸಲಾಗಿದೆ. ವರದಿ ಬಂದ ನಂತರ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
ಪಡಿತರ ದಾಸ್ತಾನು ಪರಿಶೀಲನೆಗೆ ರಾಜ್ಯ ಮಟ್ಟದ ಸಮಿತಿ : ಪಡಿತರ ದಾಸ್ತಾನು ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿದ್ದು, ರಾಜ್ಯ ಮಟ್ಟದಲ್ಲಿ ಸಮಿತಿ ರಚಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಹೆಚ್ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿಶೆಟ್ಟಿ ಪರ ಡಿ. ಎಸ್ ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಕ್ರಮ ಪಡಿತರ ಸಾಗಣೆ ಮಾಡಲಾಗುತ್ತಿದ್ದ 31 ಕೋಟಿಗೂ ಅಧಿಕ ಮೊತ್ತದ ಪಡಿತರ ವಶಪಡಿಸಲಾಗಿದೆ. ಕೇಸು ಹಾಕಿ ವಶಕ್ಕೆ ಪಡೆಯಲಾಗಿದ್ದು, ಪಡಿತರ ಹಂಚಿಕೆ ಮಾಡಿ ಜಪ್ತಿ ಮಾಡಿದ್ದ ವಾಹನಗಳನ್ನು ಹರಾಜು ಹಾಕುವ ಕೆಲಸ ಮಾಡಲಾಗಿದೆ.
ಅಕ್ರಮ ಸಾಗಾಣಿಕೆ ತಡೆಗೆ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿದ್ದು, ಪ್ರತಿ ವಾರ ದಾಸ್ತಾನು ಪರಿಶೀಲನೆ ಮಾಡಲಾಗುತ್ತಿದೆ. ಎಷ್ಟು ವಿತರಣೆಯಾಗಿದೆ, ಎಷ್ಟು ದಾಸ್ತಾನು ಇರಬೇಕು ಎಂದು ಪರಿಶೀಲಿಸಲಾಗುತ್ತಿದೆ. ಚಿತ್ರದುರ್ಗದ ಎರಡು ಕಡೆ ರಾಗಿ ದಾಸ್ತಾನು ವೇಳೆ ಸಮಸ್ಯೆಯಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಈ ಬಾರಿ ದಾಸ್ತಾನು ಮಾಡುವಾಗ ಗುಣಮಟ್ಟದ ರಾಗಿ ಸಂಗ್ರಹಕ್ಕೆ ಸೂಚಿಸಿದ್ದೇವೆ. ಹಿಂದೆ ಆದಂತಹದ್ದು ಮರುಕಳಿಸದಂತೆ ಕ್ರಮ ವಹಿಸಲಾಗುತ್ತದೆ. ಸದ್ಯ ಇರುವ ಜಿಲ್ಲಾ ಮಟ್ಟದ ಸಮಿತಿ ಜೊತೆ ರಾಜ್ಯ ಮಟ್ಟದ ಸಮಿತಿ ರಚಿಸುವ ಕುರಿತು ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ: ಮುಂದಿನ ವರ್ಷದಿಂದ ಉಚಿತ ಬೈಸಿಕಲ್ ವಿತರಣೆ: ಮಧು ಬಂಗಾರಪ್ಪ ಭರವಸೆ