ಚಿಕ್ಕೋಡಿ/ಬೆಳಗಾವಿ: ಮತದಾರರು 15 ಅನರ್ಹ ಅಭ್ಯರ್ಥಿಗಳನ್ನು ತಿರಸ್ಕರಿಸುವ ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಕಾಗವಾಡ ಕ್ಷೇತ್ರದ ಕವಲಗುಡ್ಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ 15 ಕ್ಷೇತ್ರದಲ್ಲಿ ಉಪ ಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ. ಅನರ್ಹರ ವಿರುದ್ಧ ವಾತಾವರಣ ರಾಜ್ಯದ 15 ಕ್ಷೇತ್ರದಲ್ಲಿಯೂ ಇದೆ ಎಂದ್ರು. ಬಿಜೆಪಿಯಲ್ಲೇ ಅನರ್ಹ ಅಭ್ಯರ್ಥಿಗಳಿಗೆ ಸರಿಯಾದ ಪ್ರೋತ್ಸಾಹ ಇಲ್ಲ. ಜನಸಾಮಾನ್ಯರಿಗೆ ಸರ್ಕಾರ ಇದೆ ಅಂತಾನೇ ಗೊತ್ತಿಲ್ಲದ ಸ್ಥಿತಿ ಇದೆ. ಬಿಜೆಪಿಯವರ ಯಾವ ಕಸರತ್ತು ಈ ಚುನಾವಣೆಯಲ್ಲಿ ಕೆಲಸ ಮಾಡಲ್ಲ. ಒಂದೊಂದು ಕ್ಷೇತ್ರಕ್ಕೆ 25-30 ಕೋಟಿ ಹಣ ಸಾಗಾಣಿಕೆ ಪ್ರಾರಂಭವಾಗಿದೆ ಎಂದು ಆರೋಪಿಸಿದ್ರು. ಬಿಜೆಪಿಯಿಂದ ಜನ ಹಣ ತಗೊಂಡ್ರೂ ಅವರಿಗೆ ಮತ ಹಾಕಲ್ಲ ಎಂದು ಹೇಳಿದ್ರು.
ತಾಜ್ ವೆಸ್ಟ್ ಎಂಡ್ ಹೋಟೆಲ್ನಿಂದ ಕುಮಾರಸ್ವಾಮಿ ಆಡಳಿತ ನಡೆಸುತ್ತಿದ್ದರು ಎಂದು ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ, ತಾಜ್ ವೆಸ್ಟ್ ಎಂಡ್ ಅನ್ನೋದು ಎಲ್ಲರಿಗೂ ಮಂತ್ರ ಪಠಣ ಥರ ಆಗಿದೆ. ನಾನು ಅವಶ್ಯಕತೆ ಹಿನ್ನೆಲೆ ಅದನ್ನು ಇಟ್ಟುಕೊಂಡಿದ್ದೇನೆ. ಈಗಲೂ ತಾಜ್ ವೆಸ್ಟ್ ಎಂಡ್ನಲ್ಲಿ ರೂಮ್ ಇದೆ ಎಂದರು. ಶ್ರೀಮಂತ ಪಾಟೀಲ್ ಪ್ರತಿದಿನ ನನ್ನ ಹತ್ತಿರ ಬರ್ತಿದ್ರು. ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಹತ್ತಿರ ಬರ್ತಿರಲಿಲ್ಲ. ಫ್ಯಾಕ್ಟರಿ ಕೋಜೆನ್ ಅನುಮತಿ, ಕೆಲಸದ ವಿಚಾರದಲ್ಲಿ ನನ್ನ ಹತ್ತಿರ ಬರ್ತಿದ್ರು. ಇಂತಹ ವ್ಯಕ್ತಿಗಳು ಜನರನ್ನ ಲೂಟಿ ಹೊಡೆದಿದ್ದಾರೆ. ಇವರು ತಮ್ಮ ಅಭಿವೃದ್ಧಿ ಮಾಡಿಕೋಳ್ತಿದ್ದಾರೆ. ಕಾಗವಾಡ ಅಭಿವೃದ್ಧಿ ಅಲ್ಲ. ಸರ್ಕಾರ ಉಳಿಸೋದು ಅಥವಾ ಬೀಳಿಸೋದು ನನ್ನ ಕಡೆ ಇದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದನ್ನು ಡಿಸೆಂಬರ್ 9ರ ನಂತರ ಹೇಳ್ತಿನಿ ಬನ್ನಿ ಎಂದ್ರು.