ಸವದತ್ತಿ: (ಬೆಳಗಾವಿ) ನವಿಲು ತೀರ್ಥ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದರಿಂದ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ನದಿ ಪಾತ್ರದಲ್ಲಿರುವ ಮುನವಳ್ಳಿ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ 30ಕ್ಕೂ ಹೆಚ್ಚು ಅಂಗಡಿ- ಮುಂಗಟ್ಟುಗಳು ಜಲಾವೃತವಾಗಿವೆ.
ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಮಲಪ್ರಭಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಡ್ಯಾಮ್ನಿಂದ (ನವಿಲು ತೀರ್ಥ) ಈಗಾಗಲೇ 26 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ, ಮುನವಳ್ಳಿ ದಂಡೆಯಲ್ಲಿ ಬಣಕಾರ ಓಣಿ ಸೇರಿದಂತೆ ಇತರೆಡೆ ಮನೆಗಳು,ಅಂಗಡಿಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ಇನ್ನು ಖಾನಾಪುರ ತಾಲೂಕಿನಲ್ಲಿ ಮಳೆಯ ಪ್ರಮಾಣದಲ್ಲಿ ಸ್ವಲ್ಪಮಟ್ಟಿಗೆ ಕಡಿಮೆ ಆಗಿದ್ದರೂ ಜಲಾಶಯಕ್ಕೆ ಒಳಹರಿವು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸ್ಥಳೀಯ ಶಾಸಕ ಆನಂದ ಮಾಮನಿ ನಿವಾಸಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.