ಚಿಕ್ಕೋಡಿ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನುಮಾನಾಸ್ಪದವಾಗಿ ಮಾರಕಾಸ್ತ್ರ ಹಿಡಿದು ನಿಂತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲ್ಲಾಪುರ ಕಡೆಯಿಂದ ಬೆಳಗಾವಿ ಕಡೆಗೆ ಇವರು ತೆರಳುತ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನು ನಿಪ್ಪಾಣಿಯ ಪಾವಲೆಗಲ್ಲಿಯ ಮೋಹನ ಸುರೇಶ ಪವಾರ (20), ಆಶ್ರಯ ನಗರದ ಹರೀಶ ಪಾಂಡುರಂಗ ಡಾಂಗರೆ (28), ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ ತಾಲೂಕಿನ ದಾವಣೆ ಗಲ್ಲಿಯ ಮಧುಕರ ಶಂಕರ ನಿಕ್ಕಮ್ (43), ನಂದೀಶ ಮಾರುತಿ ಪೂಜಾರಿ(33), ಹುಪರಿಯ ವಾಳವೇಕರ ನಗರದ ಅಮರ ಅಣ್ಣಪ್ಪಾ ಬಾಗಲ (35) ಎಂದು ಗುರುತಿಸಲಾಗಿದೆ.
ಇವರೆಲ್ಲರೂ ದರೋಡೆ ಮಾಡುವ ಉದ್ದೇಶದಿಂದ ಚಾಕು, ನಕಲಿ (ಡಮ್ಮಿ) ಪಿಸ್ತೂಲ್, ಬಿದಿರಿನ ಬಡಿಗೆ, ಕಾರದ ಪುಡಿ, ಹಗ್ಗ ಕೈಯಲ್ಲಿ ಹಿಡಿದುಕೊಂಡು ನಿಂತುಕೊಂಡಿದ್ದರು. ಮೋಹನ ಸುರೇಶ ಪವಾರ ಮಹಾರಾಷ್ಟ್ರ ಪೊಲೀಸರ ಸಮವಸ್ತ್ರ ಹೋಲುವ ಬಟ್ಟೆ ಧರಿಸಿ ನಕಲಿ ಐಡಿ ಕಾರ್ಡ್ ಇಟ್ಟುಕೊಂಡಿದ್ದ. ಈತ ಪೊಲೀಸಿನಂತೆ ನಟಿಸಿ ವಾಕಿಟಾಕಿ ಹಿಡಿದುಕೊಂಡು ಚಾಲಕರನ್ನು ತಡೆದು ದರೋಡೆ ಮಾಡಲು ಮುಂದಾಗಿದ್ದ ಎನ್ನಲಾಗಿದೆ.
ಬಂಧಿತರಿಂದ 55,000 ರೂ. ಮೌಲ್ಯದ ಎರಡು ಬೈಕ್, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.