ಬೆಳಗಾವಿ: ಧಾರಾಕಾರ ಮಳೆಗೆ ಮಲಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಜಿಲ್ಲೆಯ ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
ಪಾರಿಶ್ವಾಡ - ಹೀರೇಮುನವಳ್ಳಿ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಈ ನಡುವೆ ಮುಳುಗಡೆಯಾದ ಸೇತುವೆ ಬಳಿ ಗ್ರಾಮಸ್ಥರು ಆಗಮಿಸಿದ್ದು, ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ನದಿಯ ತಟದಲ್ಲಿಯೇ ಬಂದು ನಿಂತಿರುವುದು ಕಂಡುಬಂದಿದೆ. ಪ್ರವಾಹದ ಭೀತಿಯಿಂದ ಮುಂಜಾಗೃತೆ ಕೈಗೊಳ್ಳಬೇಕಾಗಿದ್ದ ನದಿ ಪಾತ್ರದ ಜನರು ಪ್ರವಾಹ ವೀಕ್ಷಣೆಗೆ ಆಗಮಿಸಿದ್ದು, ಅಪಾಯದ ಪರಿವೇ ಇಲ್ಲದೆ ನಿಂತಿದ್ದರು.
ಇದಲ್ಲದೆ ಮುಳುಗಡೆಯಾದ ಸೇತುವೆ ಬಳಿ ಬ್ಯಾರಿಕೇಡ್ ವ್ಯವಸ್ಥೆ ಕಲ್ಪಿಸದೆ ತಾಲೂಕು ಆಡಳಿತ ಸಹ ನಿರ್ಲಕ್ಷ್ಯ ತೋರಿರುವುದು ಕಂಡುಬಂದಿದೆ. ಮುಳುಗಡೆಯಾದ ಸೇತುವೆ ವೀಕ್ಷಣೆಗೆ ಜನರು ಆಗಮಿಸುತ್ತಿದ್ದು, ಇನ್ನಾದರೂ ತಾಲೂಕಾಡಳಿತ ಎಚ್ಚೆತ್ತು ಸೇತುವೆ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕಿದೆ.
ಸೇತುವೆ ಮುಳುಗಡೆಯಾದ ಪರಿಣಾಮ ಪಾರಿಶ್ವಾಡ ಗ್ರಾಮಕ್ಕೆ ಸಂಪರ್ಕಿಸುವ 9 ಗ್ರಾಮಗಳ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಹಿರೇಮುನವಳ್ಳಿ, ಚಿಕ್ಕಮುನವಳ್ಳಿ, ಅಂಗ್ರೊಳ್ಳಿ, ಕರ್ತನಬಾಗೇವಾಡಿ, ಇಟಗಿ, ಮುನ್ಯಾನಟ್ಟಿ, ಹಂದೂರು, ಬೀಡಿ ಸೇರಿದಂತೆ 9 ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.