ಬೆಳಗಾವಿ: ಬಿಸಿಲಿನ ಬೇಗೆಯಿಂದ ಜನ, ಜಾನುವಾರುಗಳು ನೀರಿಲ್ಲದೇ ತತ್ತರಿಸಿ ಹೋಗಿದ್ದು ತಕ್ಷಣ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಬಿಡುಗಡೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರ ಕಚೇರಿ ಮತ್ತು ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ರೈತರು, ಗೋಕಾಕ್, ರಾಯಬಾಗ, ಜಮಖಂಡಿ, ಮೂಡಲಗಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಶೀಘ್ರವೇ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿದರು.
ಇದೇ ವೇಳೆ, ಈಟಿವಿ ಭಾರತ ಜತೆಗೆ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಇಂದು ಬೋರವೆಲ್, ಬಾವಿ, ಹಳ್ಳ, ಕೆರೆಗಳು ಬತ್ತಿ ಹೋಗಿದ್ದ ಪರಿಣಾಮ ದನಕರುಗಳಿಗೆ ನೀರು ಕುಡಿಯಲು ಸಾಕಷ್ಟು ಸಮಸ್ಯೆ ಆಗಿದೆ. ಹೀಗಾಗಿ ತಕ್ಷಣ 20 ದಿನಗಳ ಕಾಲ ನಿರಂತರವಾಗಿ ಕಾಲುವೆಗಳಿಗೆ ನೀರು ಹರಿಸಬೇಕು.
ಸೋಮವಾರದೊಳಗೆ ನೀರು ಹರಿಸಲು ಆರಂಭಿಸದಿದ್ದರೆ ಬುಧವಾರ ರಾಜ್ಯ ಹೆದ್ದಾರಿ ತಡೆದು ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅಧಿಕಾರಿಗಳು ನೀರು ಬಿಡುವುದಾಗಿ ಭರವಸೆ ಕೊಟ್ಟಿದ್ದು, ನಾಳೆ ರಚನೆ ಆಗುತ್ತಿರುವ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಗಮನಹರಿಸಬೇಕು. ಶಾಸಕರು ಎಲ್ಲರೂ ಸೇರಿಕೊಂಡು ನೀರು ಹರಿಸಲೇಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತರಾದ ಎಂ.ಜಿ.ಅನಗೋಳ, ಎಂ.ಕೆ.ಕಲ್ಲತ್ತಿ, ಗೋವಿಂದ ಪೂಜೇರಿ, ಮಹಾದೇವ ಮಗದುಮ್ಮ, ಅಜಿತ್ ನಾಯಿಕ್, ಎಸ್.ಎಸ್.ಪಾಟೀಲ, ಬಿ.ಎ.ಪಾಟೀಲ, ಸಿದ್ದಪ್ಪ ಸುಣಧೋಳಿ, ಬಸಯ್ಯ ಹಿರೇಮಠ ಸೇರಿ ಮತ್ತಿತರರು ಇದ್ದರು.
ಬಿಸಲಿನ ಬೇಗೆ ತತ್ತರಿಸಿದ ಜನ: ಇನ್ನು ದೇಶಾದ್ಯಂತ ಬಿಸಿಲಿನ ಬೇಗೆ ಆರಂಭವಾಗಿದೆ. ಜನರು ಆರಂಭದ ಬಿಸಿಲಿಗೆ ತತ್ತರಿಸುತ್ತಿದ್ದಾರೆ. ದೇಶದ ಕೆಲವೊಂದು ಭಾಗದಲ್ಲಿ ಮುಂದಿನ ನಾಲ್ಕೈದು ದಿನಗಳಲ್ಲಿ ಮತ್ತಷ್ಟು ಬಿಸಿಲು ಹೆಚ್ಚಾಗುವ ಸಾಧ್ಯತೆಯಿದೆ ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
41 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ : ಗುಜರಾತ್ನ ರಾಜ್ಕೋಟ್ನಲ್ಲಿ 41.3, ಅಮ್ರೇಲಿಯಲ್ಲಿ 41.5, ಭುಜ್ನಲ್ಲಿ 41.8 ಮತ್ತು ಸುರೇಂದ್ರ ನಗರದಲ್ಲಿ 41.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
- ಮಹಾರಾಷ್ಟ್ರದ ಅಮರಾವತಿಯಲ್ಲಿ 41.8, ವಾಶಿಮ್ನಲ್ಲಿ 42.5, ವಾರ್ಧಾದಲ್ಲಿ 42.8, ನಾಗ್ಪುರದಲ್ಲಿ 42.1, ಬ್ರಹ್ಮಪುರಿಯಲ್ಲಿ 41.8 ಮತ್ತು ಗೊಂಡಿಯಾದಲ್ಲಿ 41.5, ಮಾಲೆಗಾಂವ್ನಲ್ಲಿ 41, ಸೊಲ್ಲಾಪುರದಲ್ಲಿ 42.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
- ರಾಜಸ್ಥಾನದ ಗಂಗಾನಗರದಲ್ಲಿ 41.3, ಚುರುದಲ್ಲಿ 43, ಬಿಕಾನೇರ್ದಲ್ಲಿ 42.5, ಜೈಸಲ್ಮೇರ್ದಲ್ಲಿ 41.8, ಬಾರ್ಮರ್ದಲ್ಲಿ 42.7, ಜೋಧ್‌ಪುರದಲ್ಲಿ 41.2, ಪಿಲಾನಿಯಲ್ಲಿ 42.8 ಮತ್ತು ಕೋಟಾದಲ್ಲಿ 41.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
- ಮಧ್ಯಪ್ರದೇಶದ ರತ್ಲಂನಲ್ಲಿ 41.8, ಗ್ವಾಲಿಯರ್ನಲ್ಲಿ 41.7, ರಾಜ್‌ಗಢದಲ್ಲಿ 42, ಖಾಂಡ್ವಾದಲ್ಲಿ 42.1, ಖಾರ್ಗೋನ್ನಲ್ಲಿ 42.4, ಧಾರ್ನಲ್ಲಿ 41.2, ಖಜುರಾಹೊದಲ್ಲಿ 42.4, ದಾಮೋಹ್ದಲ್ಲಿ 41.8 ಮತ್ತು ಸತ್ನಾದಲ್ಲಿ 41.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ
- ಕರ್ನಾಟಕದ ರಾಯಚೂರಿನಲ್ಲಿ 42.8, ಕಲಬುರಗಿಯಲ್ಲಿ 42 ಮತ್ತು ಬೀದರ್ ಜಿಲ್ಲೆಯಲ್ಲಿ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು IMD ಡೇಟಾ ತೋರಿಸಿದೆ.
ಹೆಚ್ಚಿನ ಭಾಗಗಳಲ್ಲಿ ಸಾಧಾರಣ ಬಿಸಿಲಿನ ಮಟ್ಟದಿಂದ ತೀವ್ರ ಬಿಸಿಲಿನ ಮಟ್ಟಕ್ಕೆ ಇಂದಿನಿಂದ ಹಲವು ಭಾಗಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಕೆಲವು ಭಾಗಗಳಲ್ಲಿ ಪಶ್ಚಿಮ ಉತ್ತರ ಪ್ರದೇಶ, ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಮಧ್ಯಪ್ರದೇಶ, ದಕ್ಷಿಣ ಹರಿಯಾಣ ಮತ್ತು ದೆಹಲಿಯಲ್ಲಿ ಸಾಧಾರಣ ಮಟ್ಟದ ಬಿಸಿಲು ಮುಂದುವರಿಯು ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂಓದಿ:ನಾಳೆ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ: ಕಂಠೀರವ ಸ್ಟೇಡಿಯಂ ಸುತ್ತ ಬಿಗಿ ಭದ್ರತೆ