ಬೆಳಗಾವಿ: ಕೊರೊನಾ ವೈರಸ್ ಹಿನ್ನೆಲೆ ಕುಂದಾನಗರಿ ಜನರು ಅನೇಕ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಇತ್ತ ಮೇವು ಇಲ್ಲದೇ ಪರದಾಡುತ್ತಿದ್ದ ಜಾನುವಾರುಗಳಿಗೆ ಇಲ್ಲೊಬ್ಬ ರೈತರು ಉಚಿತವಾಗಿ ಗೋವಿನ ಜೋಳದ ಮೇವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ರೈತ ರವಿಗೌಡ ಪಾಟೀಲ ದನಗಳಿಗೆ ಮೇವು ನೀಡಿದವರು. ಇವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಬೆಳೆದ ಗೋವಿನ ಜೋಳದ ಮೇವನ್ನು ಉಚಿತವಾಗಿ ನೀಡಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆ ಪಕ್ಕದ ಗ್ರಾಮ ಹಿರೇಬಾಗೆವಾಡಿಯಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಮೇವಿನ ಅಭಾವ ಆಗಿತ್ತು. ಹೀಗಾಗಿ ಜಾನುವಾರುಗಳ ಸ್ಥಿತಿ ಹೇಳತೀರದಾಗಿದೆ. ಇದನ್ನು ಅರಿತ ರೈತ ರವಿಗೌಡ ತನ್ನ ಕೈಲಾದಷ್ಟು ಉಚಿತವಾಗಿ ಗೋವಿನ ಜೋಳದ ಮೇವು ನೀಡಿದ್ದು, ಇವರ ಕಾರ್ಯಕ್ಕೆ ಶ್ಲಾಘನೆಯೂ ವ್ಯಕ್ತವಾಗಿದೆ.
ಈ ವೇಳೆ ಪ್ರತಿಕ್ರಿಯೆ ನೀಡಿದ ರೈತ, ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವ ದನಗಳು ಮೇವಿಲ್ಲದೆ ಬಲಿಯಾಗಬಾರದು ಎಂಬ ಕಾರಣಕ್ಕೆ ರೈತರಿಗೆ ಒಬ್ಬ ರೈತನಾಗಿ ನನ್ನ ಹೊಲದಲ್ಲಿನ ಗೋವಿನ ಮೇವು ನೀಡಿದ್ದೇನೆ ಎಂದಿದ್ದಾರೆ.