ಚಿಕ್ಕೋಡಿ (ಬೆಳಗಾವಿ) : ಕಳೆದ ಎರಡು ತಿಂಗಳಿಂದ ಟೊಮೆಟೊ ಬೆಲೆ ಗಗನಕ್ಕೇರಿದ್ದು, 200 ರೂ. ಗಡಿ ಮುಟ್ಟಿದೆ. ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿರುವ ಟೊಮೆಟೊ, ರೈತರಿಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತಿದೆ. ಆದರೆ ಇತ್ತೀಚೆಗೆ ತೋಟಕ್ಕೆ ನುಗ್ಗಿ ಟೊಮೆಟೊ ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಡುವೆ ರೈತರೋರ್ವರು ಟೊಮೆಟೊ ಕಳ್ಳನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ರಾಯಭಾಗ ತಾಲೂಕಿನ ಸಿದ್ದಾಪೂರ ಗ್ರಾಮದ ಬುಜಪ್ಪಾ ಗಾಣಗೇರ ಎಂಬುವರು ಟೊಮೆಟೊ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ರಾಯಭಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ರೈತರಾದ ಕುಮಾರ ಗುಡೋಡಗಿ ಎಂಬುವರು ತಮ್ಮ ಅರ್ಧ ಎಕರೆ ಹೊಲದಲ್ಲಿ ಟೊಮೆಟೊ ಬೆಳೆದಿದ್ದರು. ಈ ಟೊಮೆಟೊವನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿ ಉತ್ತಮ ಆದಾಯ ಪಡೆಯುತ್ತಿದ್ದರು. ಈ ನಡುವೆ ಕಳೆದ 20 ದಿನದಿಂದ ಜಮೀನಿನಲ್ಲಿ ಬೆಳೆದ ಟೊಮೆಟೊ ಕಳ್ಳತನವಾಗುತ್ತಿರುವುದು ರೈತನನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಈ ಹಿನ್ನೆಲೆ ಜಮೀನನಲ್ಲಿ ಕಾದು ಕುಳಿತ ರೈತ ಕೊನೆಗೂ ಟೊಮೆಟೊ ಕಳ್ಳನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : ಟೊಮೆಟೊ ಖರೀದಿಸಿ ಹಣ ಕೊಡದೆ ಇಬ್ಬರು ಬಾಲಕರನ್ನು ಒತ್ತೆ ಇಟ್ಟು ಆಸಾಮಿ ಪರಾರಿ!
ಈ ಬಗ್ಗೆ ಮಾತನಾಡಿದ ರೈತ ಕುಮಾರ ಗುಡೋಡಗಿ, ಟೊಮೆಟೋ ಬೆಲೆ ಹೆಚ್ಚಾದಂದಿನಿಂದ ನಮ್ಮ ತೋಟದಲ್ಲಿ ಟೊಮೆಟೊ ಕಳ್ಳತನವಾಗುತ್ತಿದ್ದವು. ಕಳೆದ 20 ದಿನದಿಂದ ಟೊಮೆಟೊ ಕಳ್ಳತನವಾಗುತ್ತಿವೆ. ಈ ಬಗ್ಗೆ ಅನುಮಾನ ಬಂದು ನಮ್ಮ ಯುವಕನೊಬ್ಬನನ್ನು ಇಲ್ಲಿ ಕಾವಲಿಗೆ ಇರಿಸಿದ್ದೆವು. ಇಂದು ಮುಂಜಾನೆ ಸುಮಾರಿಗೆ ಆಗಮಿಸಿದ ವ್ಯಕ್ತಿಯೋರ್ವ ಕಳ್ಳತನ ಮಾಡುವಾಗ ಆತನನ್ನು ಸೆರೆಹಿಡಿಯಲಾಗಿದೆ. ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಹೇಳಿದರು.
ಕಳೆದ 20 ದಿನದಿಂದ ಪ್ರತಿನಿತ್ಯ ಸುಮಾರು ಹತ್ತು ಬಾಕ್ಸ್ ಟೊಮೆಟೊ ಕಳ್ಳತನವಾಗಿವೆ. ಇದುವರೆಗೆ ಅಂದಾಜು 200 ಬಾಕ್ಸ್ ಟೊಮೆಟೊ ಕಳ್ಳತನ ವಾಗಿದೆ. ಒಂದು ಬಾಕ್ಸ್ ದರ 2200 ರೂಪಾಯಿ ಇದೆ. ಈ ಹಿಂದೆ ಬೆಳಗಾವಿ ಮಾರುಕಟ್ಟೆಗೆ ನಾವು ಟೊಮೆಟೊ ಮಾರಾಟ ಮಾಡುತ್ತಿದ್ದೆವು. ಇದೀಗ ವಿಜಯಪುರದಲ್ಲಿ ಟೊಮೆಟೋ ಮಾರಾಟ ಮಾಡುತ್ತಿದ್ದೇವೆ. ಈ ಖದೀಮನಿಂದ ನಮಗೆ ಬಾರಿ ಪ್ರಮಾಣದ ನಷ್ಟ ಉಂಟಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಈ ಹಿಂದೆ ಕೂಡಾ ನಮ್ಮ ತೋಟದಲ್ಲಿ ಮೆಣಸಿನಕಾಯಿ ಕಳ್ಳತನವಾಗಿತ್ತು. ಆದರೆ ಸಾಕ್ಷಿ ಇಲ್ಲದೆ ಇದ್ದುದರಿಂದ ನಾವು ಪೊಲೀಸರಿಗೆ ದೂರು ನೀಡಿರಲಿಲ್ಲ. ಟೊಮೆಟೊ ಕಳ್ಳನನ್ನು ಹಿಡಿಯಲು ಕಳೆದ 15 ದಿನದಿಂದ ಸತತ ಪ್ರಯತ್ನಪಟ್ಟು ಇಂದು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಕೋಲಾರದಿಂದ 21 ಲಕ್ಷ ರೂ. ಮೌಲ್ಯದ ಟೊಮೆಟೊ ಸಾಗಿಸುತ್ತಿದ್ದ ಲಾರಿ ರಾಜಸ್ಥಾನದಲ್ಲಿ ಖಾಲಿಯಾಗಿ ಪತ್ತೆ