ಬೆಳಗಾವಿ: ತನ್ನ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಸ್ವತಃ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ ಘಟನೆ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ.
ಸವದತ್ತಿ ಮತಕ್ಷೇತ್ರದ ಯರಗಟ್ಟಿ ತಾಲೂಕಿನ ಮುಗಳಿಗಾಳ ಗ್ರಾಮದ ಲಕ್ಷ್ಮಣ ತಿಪ್ಪಣ್ಣಾ ಪುಂಜಿ (38)ಕೊಲೆಗೀಡಾದ ವ್ಯಕ್ತಿ. ಮೃತನ ಹೆಂಡತಿ ಉದ್ಧವ್ವ ಪುಂಜಿ ಎಂಬಾಕೆ ಸವದತ್ತಿ ತಾಲೂಕಿನ ಮುಳ್ಳಿಕೇರಿ ಗ್ರಾಮದ ಅರ್ಜುನ್ ಆರೇರ್ ಎಂಬುವನ ಜೊತೆಗೆ ಕಳೆದ ಹಲವು ವರ್ಷಗಳಿಂದ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಳು ಎನ್ನಲಾಗ್ತಿದೆ.
ಇಬ್ಬರ ಕಳ್ಳಾಟದ ವಿಷಯ ಗಂಡ ಲಕ್ಷ್ಮಣಗೆ ತಿಳಿದಿತ್ತು. ಹೀಗಾಗಿ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತ್ನಿ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಅದರಂತೆ ಕಳೆದ ಎರಡು ದಿನಗಳ ಹಿಂದೆ ಅಂದ್ರೆ (4/06/2021)ರಂದು ಮನೆಗೆ ಕರೆಯಿಸಿಕೊಂಡು ಕುತ್ತಿಗೆಗೆ ಹಗ್ಗವನ್ನು ಬಿಗಿದು ಕೊಲೆ ಮಾಡಿದ್ದಾರೆ. ಅಪಘಾತ ಎಂದು ಬಿಂಬಿಸಲು ಮೃತನ ದೇಹವನ್ನು ಆತನ ಬೈಕ್ ಮೇಲೆಯೇ ಇಟ್ಟುಕೊಂಡು ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ಬೈಕ್ ಸಮೇತ ಎಸೆದು ಅಪಘಾತವಾಗಿದೆ ಎಂಬುದನ್ನು ತೋರಿಸಲು ಪ್ರಯತ್ನಿಸಿದ್ದರು.
ಕೊಲೆಯಾದ ಬಗ್ಗೆ ಮೃತನ ಸಹೋದರ ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಬೇಟಿ ನೀಡಿದ ಡಿವೈಎಸ್ಪಿ ರಾಮನಗೌಡ ಹಟ್ಟಿ, ಸಿಪಿಐ ಮಂಜುನಾಥ ನಡವಿನಮನಿ, ಪಿಎಸ್ಐ ಪ್ರವೀಣ್ ಗಂಗೋಳ್ಳಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಪತ್ನಿಯೇ ಕೊಲೆಯಲ್ಲಿ ಭಾಗಿಯಾಗಿರುವುದು ಪತ್ತೆ ಆಗಿದ್ದು, ಇಬ್ಬರು ಆರೋಪಿಗಳಿಗೆ ಸಿಬ್ಬಂದಿ ಬಲೆ ಬೀಸಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.