ಬೆಳಗಾವಿ: ಮನೆ ಬಾಡಿಗೆ ಕಟ್ಟಲಾಗದೇ ಬೀದಿ ಬದಿ ವಾಸವಾಗಿದ್ದ ಕುಟುಂಬವೊಂದರ ನೆರವಿಗೆ ಧಾವಿಸುವ ಮೂಲಕ ಮಹಾನಗರ ಪಾಲಿಕೆ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.
ಹುಕ್ಕೇರಿ ತಾಲೂಕು ಕರಜಗಿ ಗ್ರಾಮದ ಶಂಕರ್ ಮೀರಜ್ಕರ್ ಬೀದಿಗೆ ಬಿದ್ದಿದ್ದ ಕುಟುಂಬಸ್ಥರು. ಇವರ ದುಸ್ಥಿತಿ ಕುರಿತು "ಪಾರ್ಶ್ವವಾಯು ಪತಿ, ಮಾನಸಿಕ ಅಸ್ವಸ್ಥ ಪುತ್ರ... ಬಾಡಿಗೆ ಕಟ್ಟಲಾಗದೇ ಬೀದಿಗೆ ಬಿತ್ತು ಈ ಕುಟುಂಬ"! ಶೀರ್ಷಿಕೆಯಡಿ 'ಈಟಿವಿ ಭಾರತ'ನಲ್ಲಿ ವಿಸ್ತೃತ ವರದಿ ಬಿತ್ತರಿಸಲಾಗಿತ್ತು. ವರದಿಗೆ ಸ್ಪಂದಿಸಿದ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ನಗರದ ತಾನಾಜಿ ಗಲ್ಲಿಯಲ್ಲಿ ಬೀದಿಬದಿ ವಾಸವಿದ್ದ ಬಡ ಕುಟುಂಬವನ್ನು ಭೇಟಿ ಮಾಡಿದರು. ಇವರ ಸಮಸ್ಯೆ ಆಲಿಸಿ ಮನೆ ಬಾಡಿಗೆ ಕಟ್ಟುವುದಾಗಿ ತಿಳಿಸಿದರು. ಬಳಿಕ ಆಹಾರ ಪದಾರ್ಥಗಳಿದ್ದ ಮೂರು ಕಿಟ್ಅನ್ನು ಕುಟುಂಬಕ್ಕೆ ಹಸ್ತಾಂತರಿಸಿ, ಮಹಿಳೆಗೆ ಒಂದು ಸಾವಿರ ರೂ. ನಗದು ನೀಡಿದರು.
ಪಾರ್ಶ್ವವಾಯು ಪತಿ, ಮಾನಸಿಕ ಅಸ್ವಸ್ಥ ಪುತ್ರ... ಬಾಡಿಗೆ ಕಟ್ಟಲಾಗದೇ ಬೀದಿಗೆ ಬಿತ್ತು ಈ ಕುಟುಂಬ!
ನಂತರ ವರದಿ ನೋಡಿ ಸ್ಥಳಕ್ಕಾಗಮಿಸಿದ ಪಾಲಿಕೆಯ ಆರೋಗ್ಯಾಧಿಕಾರಿ ಬಸವರಾಜ ಧಬಾಡಿ ನೇತೃತ್ವದ ತಂಡ, ಬಡ ಕುಟುಂಬದ ಸಮಸ್ಯೆಗೆ ಸ್ಪಂದಿಸಿದರು. ತಕ್ಷಣವೇ ಪಾಲಿಕೆ ವಾಹನವನ್ನು ಸ್ಥಳಕ್ಕೆ ಕರೆಯಿಸಿ ಮೂವರು ಕುಟುಂಬ ಸದಸ್ಯರನ್ನು ನಿರ್ಗತಿಕರ ಕೇಂದ್ರಕ್ಕೆ ಸ್ಥಳಾಂತರಿಸಿದರು. ಅಲ್ಲದೇ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಶಂಕರ್ ಮೀರಜ್ಕರ್ ಹಾಗೂ ಮಾನಸಿಕ ಅಸ್ವಸ್ಥ ಪುತ್ರ ನಾರಾಯಣ ಮೀರಜ್ಕರಗೆ ಉಚಿತ ಚಿಕಿತ್ಸೆ ಕೊಡಿಸುವ ಭರವಸೆಯನ್ನು ನೀಡಿದ್ದಾರೆ. ಜಿಟಿಜಿಟಿ ಮಳೆಯಲ್ಲೇ ಬಿದಿಬದಿ ವಾಸವಿದ್ದ ಕುಟುಂಬ ಇದೀಗ ಬೆಚ್ಚನೆಯ ಗೂಡು ಸೇರಿಕೊಂಡಿದೆ.
ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬಂತು ಕುಟುಂಬ:
ಲಾಕ್ಡೌನ್ ಹಿನ್ನೆಲೆ ಮೂರು ತಿಂಗಳಿಂದ ಕೆಲಸ ಕಳೆದುಕೊಂಡಿದ್ದ ಮೀರಜ್ಕರ್ ಕುಟುಂಬಕ್ಕೆ ಮನೆ ಬಾಡಿಗೆ ಪಾವತಿಸಲು ಆಗಿಲ್ಲ. ಹೀಗಾಗಿ ಮನೆ ಮಾಲೀಕ ರಾಜ್ಯ ಸರ್ಕಾರ ಆದೇಶ ಉಲ್ಲಂಘಿಸಿ ಬಡ ಕುಟುಂಬವನ್ನು ಮನೆಯಿಂದ ಹೊರಹಾಕಿದ್ದಾನೆ. ಮನೆಯಲ್ಲಿದ್ದ ವಸ್ತುಗಳ ಜೊತೆಗೆ ತಾನಾಜಿ ಗಲ್ಲಿಯ ಸಂಭಾಜೀ ಉದ್ಯಾನವನಕ್ಕೆ ಆಗಮಿಸಿದ್ದ ಈ ಕುಟುಂಬ ಪ್ರೇಕ್ಷಕರ ಗ್ಯಾಲರಿ ಕೆಳಗೆ ವಾಸವಾಗಿತ್ತು.
ಈಟಿವಿ ಭಾರತ ವರದಿ ನೋಡಿ ಬಡಪಾಯಿಗಳ ನೋವಿಗೆ ಸ್ಪಂದಿಸಿರುವ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇವೆ.