ಬೆಳಗಾವಿ : ನಗರದ ಉದ್ಯಮಬಾಗ ಪೊಲೀಸರು ವ್ಯಕ್ತಿಯೊಬ್ಬನಿಗೆ ಥಳಿಸಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ವಿಕಲಚೇತನ ವ್ಯಕ್ತಿಗೆ ಮನಬಂದಂತೆ ಪೊಲೀಸರು ಹೊಡೆದಿರುವುದು, ಸದ್ಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಿರಂಜನ ಚೌಗುಲೆ ವಿಕಲಚೇತನ ವ್ಯಕ್ತಿ ಪೊಲೀಸರಿಂದ ಹಲ್ಲೆಗೆ ಒಳಗಾಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಘಟನೆ ಕುರಿತು ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಿರಂಜನ್, ನಾನು ಊಟವನ್ನು ಪಾರ್ಸಲ್ ತೆಗೆದುಕೊಳ್ಳಲು ಹೊಟೇಲ್‌ಗೆ ಹೋಗಿದ್ದೆ. ಊಟ ಕಟ್ಟಿಸಿಕೊಂಡು ಹೊರಡುವಾಗ ಪೊಲೀಸರು ಬಂದು ತಡೆದರು. ಇಷ್ಟೊತ್ತಿನಲ್ಲಿ ಇಲ್ಲಿ ಯಾಕೆ ನಿಂತಿದ್ದಿಯಾ..? ಎಂದು ಪ್ರಶ್ನಿಸಿ ಏಕಾಏಕಿ ಹಲ್ಲೆ ಮಾಡಲು ಶುರು ಮಾಡಿದರು ಎಂದು ಆರೋಪಿಸಿದ್ದಾರೆ.
ನಾನು ಅಂಗವಿಕಲ, ಸರಿಯಾಗಿ ನಡೆಯಲು ಬರಲ್ಲ. ದಯವಿಟ್ಟು ಬಿಟ್ಟು ಬಿಡಿ ಎಂದು ಎಷ್ಟೇ ಅಂಗಲಾಚಿದರೂ ಬಿಡದ ಪೊಲೀಸರು ಸುರಿಯುವ ಮಳೆಯಲ್ಲಿ ನೆಲಕ್ಕೆ ಕೆಡವಿ ಹೊಡೆದಿದ್ದಾರೆ. ಹೊಡೆದು ಮೊಬೈಲ್, ಬೈಕ್ ಕಸಿದುಕೊಂಡು ಹೋದರು. ರಾತ್ರಿ ನಡೆಯಲಾಗದೇ ಬೀದಿಯಲ್ಲಿ ಮಲಗಿ, ಬೆಳಗ್ಗೆ ಎದ್ದು ಮನೆಗೆ ಹೋಗಿದ್ದೇನೆ ಎಂದು ಆರೋಪಿಸುತ್ತಾ ಘಟನೆ ಬಗ್ಗೆ ವಿವರಿಸಿದರು.
ನನ್ನ ಮೇಲೆ ಒಂದು ಅಪಘಾತದ ಪ್ರಕರಣ ಬಿಟ್ಟರೆ, ಯಾವುದೇ ಪ್ರಕರಣವೂ ಇಲ್ಲ. ಘಟನೆ ನಡೆದಾಗ ನಾನು ಕುಡಿದಿದ್ದು ಸತ್ಯ. ಅಲ್ಲದೇ ಸಮಯ ಕೂಡ ಬಹಳಾಗಿತ್ತು. ಆದರೆ ಹೊಡೆಯುವಂತಹ ತಪ್ಪು ನಾನು ಮಾಡಿರಲಿಲ್ಲ ಎಂದು ನಿರಂಜನ ಚೌಗುಲೆ ತಿಳಿಸಿದ್ದಾರೆ.
ಕುಡಿದ ನಶೆಯಲ್ಲಿ ಗಲಾಟೆ, ವಾಗ್ವಾದ: ನಗರ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ,’’ ನಮ್ಮ ಪೊಲೀಸ್ ಸಿಬ್ಬಂದಿ ಜೊತೆಗೆ ರಾತ್ರಿಹೊತ್ತು ಆತ ಕುಡಿದ ನಶೆಯಲ್ಲಿ ಗಲಾಟೆ, ವಾಗ್ವಾದ ಮಾಡಿದ್ದಾನೆ. ಅಲ್ಲದೇ ಸಿಬ್ಬಂದಿಗೆ ಕೆಟ್ಟದಾಗಿ ಬೈದು, ತಳ್ಳಾಟ ಕೂಡ ಮಾಡಿದ್ದಾನೆ. ಇದರಿಂದ ಕುಪಿತಗೊಂಡ ಪೊಲೀಸರು ಆತನಿಗೆ ಹೊಡೆದಿದ್ದಾರೆ. ಈ ಬಗ್ಗೆ ಎಸಿಪಿ ಅವರಿಂದ ವರದಿ ಕೇಳಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ‘‘ ಎಂದು ಸ್ಪಷ್ಟನೆ ನೀಡಿದ್ದಾರೆ.
ಇಸ್ಪೀಟ್ ದಂಧೆ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಗೆ ಥಳಿತ: ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ನಡೆಯುತ್ತಿದೆ ಎಂದು ಮಾಹಿತಿ ನೀಡಿದ ವ್ಯಕ್ತಿಗೆ ಪೊಲೀಸರೇ ಥಳಿಸಿದ್ದಾರೆ ಎಂಬ ಆರೋಪ (ಮೇ 29-2021) ಪ್ರಕರಣ ಇಂಡಿ ತಾಲೂಕಿನ ಮಸಳಿ ಬಿ.ಕೆ ಗ್ರಾಮದಲ್ಲಿ ನಡೆದಿತ್ತು.
ಇದನ್ನೂ ಓದಿ: ಇಸ್ಪೀಟ್ ದಂಧೆ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಗೆ ಇಂಡಿ ಪೊಲೀಸರಿಂದ ಥಳಿತ ಆರೋಪ