ಬೆಳಗಾವಿ: ''ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವ ಸಿಎಂ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರಿಗೆ ಎಲ್ಲಿಂದ 10 ಸಾವಿರ ಕೋಟಿ ರೂಪಾಯಿ ಕೊಡುತ್ತಾರೆ. ನೀವು ಕೇವಲ ಅಲ್ಪಸಂಖ್ಯಾತರ ಮತಗಳಿಂದ ಮಾತ್ರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದಿರಾ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡ್ತಿನಿ ಎಂದು ಹೇಳುವ ಮುಖ್ಯಮಂತ್ರಿಗಳಿಗೆ ರೈತರ ಸಮಸ್ಯೆಗಳಿಗೆ ಯಾಕೆ ಸ್ಪಂದಿಸಲು ಆಗುತ್ತಿಲ್ಲ. ನಿಮಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು, ಉತ್ತರ ಕರ್ನಾಟಕದ ಬಾದಾಮಿ ವಿಧಾನಸಭೆ ಕ್ಷೇತ್ರ. ಹಾಗಾಗಿ ಉತ್ತರ ಕರ್ನಾಟಕ ಜನ, ರೈತರ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದಿದ್ದರೆ, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಈ ರೀತಿ ವರ್ತಿಸುತ್ತಿರಲಿಲ್ಲ. ರಾಜ್ಯದ ಸಾಮಾನ್ಯ ಜನರು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ನಾವು ಜವಾಬ್ದಾರಿಯುತ ವಿರೋಧ ಪಕ್ಷದ ಸ್ಥಾನದಲ್ಲಿದ್ದು, ಸುಮ್ಮನೆ ಕುಳಿತುಕೊಳ್ಳಲು ಬರೋದಿಲ್ಲ. ಹಾಗಾಗಿ ನಮ್ಮದೇ ರೀತಿಯಲ್ಲಿ ಹೋರಾಟ ಮಾಡುತ್ತೇವೆ'' ಎಂದು ಎಚ್ಚರಿಸಿದರು.
''ಭೀಕರ ಬರಗಾಲದ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವ ಅನಿವಾರ್ಯದ ಪರಿಸ್ಥಿತಿ ನಿರ್ಮಾಣ ಆಗಿದೆ. ಹೊಸ ಸರ್ಕಾರ ಬಂದಾಗ ಅವರಿಗೆ ಎಂಟು ತಿಂಗಳು, ಒಂದು ವರ್ಷ ಸಮಯಾವಕಾಶ ನೀಡಬೇಕಾಗುತ್ತದೆ. ಆದರೆ, ಇವರ ನಡುವಳಿಕೆ, ರೈತರಿಗೆ ಪರಿಹಾರ ನೀಡಲು ಆಗದ ಈ ದುಷ್ಟ ಸರ್ಕಾರದ ವಿರುದ್ಧ ಹೋರಾಟ ಮಾಡಲೇಬೇಕಾಗಿದೆ. ಈ ನಾಡಿಗೆ ಅನ್ನ ಹಾಕುವ ರೈತರ ಜೊತೆಗೆ ಬಿಜೆಪಿ ಎಂದಿಗೂ ನಿಲ್ಲುತ್ತದೆ'' ಎಂದು ವಿಜಯೇಂದ್ರ ಹೇಳಿದರು.
ನಿನ್ನೆ ಸಿಎಲ್ಪಿ ಮೀಟಿಂಗ್ಗೆ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್, ಹೆಚ್. ವಿಶ್ವನಾಥ ಭಾಗಿಯಾಗಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ''ಇಂದು ಬೆಳಿಗ್ಗೆ ಇದರ ಬಗ್ಗೆ ಮಾಹಿತಿ ಸಿಕ್ಕಿದೆ. ಅವರ ಉದ್ದೇಶ ಏನು ಎಂಬುದನ್ನು ಚರ್ಚೆ ಮಾಡುತ್ತೇನೆ. ಇದು ಬಹಳ ಗಂಭೀರ ವಿಷಯ. ಇವತ್ತೆ ಆ ಬಗ್ಗೆ ಚರ್ಚೆ ಮಾಡಲಿದ್ದೇನೆ'' ಎಂದರು.
ಮೈಸೂರು ಮಾದರಿಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಭ್ರೂಣಹತ್ಯೆ ಬಗ್ಗೆ ಮಾತನಾಡಿ, ''ಭ್ರೂಣ ಹತ್ಯೆ ಗಂಭೀರವಾದ ವಿಚಾರ. ನಾಗರಿಕ ಸಮಾಜದಲ್ಲಿ ಈ ರೀತಿ ಘಟನೆಗಳು ನಡೆದರೆ, ನಾವ್ಯಾರೂ ಸಹ ತಲೆ ಎತ್ತಲು ಸಾಧ್ಯ ಆಗೋದಿಲ್ಲ. ಭ್ರೂಣ ಹತ್ಯೆ ಪ್ರಕರಣಗಳನ್ನು ಸಿಎಂ ಗಂಭೀರವಾಗಿ ಪರಿಗಣಿಸಬೇಕು. ಇಂಥ ಪ್ರಕರಣಗಳಿಗೆ ಇತಿಶ್ರೀ ಹಾಡುವ ನಿಟ್ಟಿಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು'' ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಾಲಯಕ್ಕೆ ಭೂಮಿ ಪೂಜೆ: ಬೆಳಗಾವಿ ಮಹಾನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಕಾರ್ಯಾಲಯ ಭೂಮಿ ಪೂಜೆಗೆ ಗುರುವಾರ ಇಲ್ಲಿನ ಸುಭಾಷ ನಗರದಲ್ಲಿ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ ಭೂಮಿ ಪೂಜೆ ನೆರವೇರಿಸಿದರು. ವಿಜಯೇಂದ್ರ ಮಾತನಾಡಿ, ''ಬಹಳಷ್ಟು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಬಿಜೆಪಿ ಕಾರ್ಯಾಲಯಕ್ಕೆ ಇಂದು ಶುಭ ಘಳಿಗೆಯಲ್ಲಿ ಪೂಜೆ ನೇರವೇರಿದೆ. ಪಕ್ಷದ ಚಟುವಟಿಕೆಗಳು ಆಗಬೇಕೆಂದು ಪಕ್ಷದ ಕಚೇರಿ ನಿರ್ಮಿಸಲಾಗಿದೆ. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಕಾರ್ಯಾಲಯ ಆಗಬೇಕು ಎಂಬುದು ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಉದ್ದೇಶವಾಗಿದೆ. ಅಲ್ಲದೇ ಯಡಿಯೂರಪ್ಪ ಅವರಿಗೂ ಕಾರ್ಯಾಲಯ ಆಗಬೇಕೆಂಬ ಕನಸು ಇತ್ತು'' ಎಂದರು.
''ಬೆಳಗಾವಿ ಜಿಲ್ಲೆ ಸಕ್ಕರೆ ನಾಡು, ಕುಂದಾನಗರಿ. ಉತ್ತರ ಕರ್ನಾಟಕ ರಾಜ್ಯದ ಹೆಬ್ಬಾಗಿಲು ಬೆಳಗಾವಿ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಚಿಕ್ಕೋಡಿ ಬೆಳಗಾವಿ ಹೆಬ್ಬಾಗಿಲು ಆಗಬೇಕು. ಬೆಳಗಾವಿ ಭಾರತೀಯ ಜನತಾ ಪಾರ್ಟಿ ಭದ್ರಕೋಟೆ ಆಗಬೇಕು. ಚಿಕ್ಕೋಡಿ, ಬೆಳಗಾವಿ ಬಿಜೆಪಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಭದ್ರಬುನಾದಿ ಹಾಕಬೇಕು'' ಎಂದು ಬಿ.ವೈ. ವಿಜಯೇಂದ್ರ ಕರೆ ನೀಡಿದರು.
''ನಿನ್ನೆ ನಡೆದ ಪ್ರತಿಭಟನೆ ಅಭೂತಪೂರ್ವ ಕಾರ್ಯಕ್ರಮ ಆಗಿದೆ. ಕಳೆದೊಂದು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಜಿಲ್ಲೆಯ ಎಲ್ಲ ನಾಯಕರು ಬಂದಿದ್ದರು. ರಾಜ್ಯದ ಸರ್ಕಾರದ ವಿರುದ್ಧ ಹೋರಾಟದ ಕಿಚ್ಚು ಹಚ್ಚಲು ಯಶಸ್ವಿಯಾಗಿದ್ದೇವೆ'' ಎಂದ ವಿಜಯೇಂದ್ರ ಅವರು, ''ಕಾರ್ಯಾಲಯ ನಿರ್ಮಾಣಕ್ಕೆ ಸಂಜಯ್ ಪಾಟೀಲ ಅವರು, 5 ಲಕ್ಷ ರೂ. ಕಾಣಿಕೆ ನೀಡಿದ್ದಾರೆ. ಈ ಕಟ್ಟಡದ ಹೊಣೆ ತಮ್ಮೆಲ್ಲರದ್ದು, ಬೆಳಗಾವಿಯಲ್ಲಿ ಬಿಜೆಪಿ ಬೆಳೆಯಲು ಜನಸಂಘ ಕಾಲದಿಂದ ಸಿ.ಎಂ. ಪಾಟೀಲ, ಅಪ್ಪಾಸಾಹೇಬ ಮುತಗೇಕರ್ ಅವರಂಥ ಅನೇಕ ಹಿರಿಯರ ಶ್ರಮವಿದೆ. ಹಲವಾರು ದಶಕಗಳ ಅವರ ಹೋರಾಟ ಶ್ರಮದಿಂದ ಬಿಜೆಪಿ ಎತ್ತರಕ್ಕೆ ಬೆಳೆದಿದೆ'' ಎಂದರು.
ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ, ಶಾಸಕರಾದ ಶಶಿಕಲಾ ಜೊಲ್ಲೆ, ಅಭಯ ಪಾಟೀಲ, ವಿಠ್ಠಲ ಹಲಗೇಕರ್, ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣ ಸ್ವಾಮಿ, ಮಾಜಿ ಶಾಸಕರಾದ ಸಂಜಯ್ ಪಾಟೀಲ, ಅನಿಲ್ ಬೆನಕೆ, ಮಹಾಂತೇಶ ದೊಡ್ಡಗೌಡರ, ಮಹೇಶ ಕುಮಟಳ್ಳಿ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಸೇರಿ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ: ರೆಸಾರ್ಟ್ನಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಮೂವರು ಬಿಜೆಪಿ ಶಾಸಕರು ಹಾಜರು