ಬೆಳಗಾವಿ: ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ ಮತ್ತು ಶಿವಸೇನೆ ಸಂಸದ ಧೈರ್ಯಶೀಲ ಮಾನೆ ಬೆಳಗಾವಿಗೆ ಬರುವುದಾಗಿ ಪತ್ರ ಬರೆದಿದ್ದಾರೆ. ಡಿಸೆಂಬರ್ 19ರಂದು ನಡೆಯಲಿರುವ ಎಂಇಎಸ್ ಮಹಾಮೇಳಾವ್ಗೆ ಬರುತ್ತಿದ್ದೇನೆ. ನನಗೆ ಸೂಕ್ತ ಭದ್ರತೆ ನೀಡಿ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಬೆಳಗಾವಿ ವಿಧಾನಮಂಡಲ ಅಧಿವೇಶನ ಆರಂಭದ ದಿನದಂದೇ ಎಂಇಎಸ್ ಮಹಾಮೇಳಾವ್ ನಡೆಸಲು ತಯಾರಿ ಮಾಡಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಬರುವುದಾಗಿ ಧೈರ್ಯಶೀಲ ಮಾನೆ ಪತ್ರ ಬರೆದಿದ್ದು, ಇದರ ಜೊತೆಗೆ ತಮ್ಮ ಪ್ರವಾಸದ ಪಟ್ಟಿಯನ್ನೂ ಸಹ ಲಗತ್ತಿಸಿದ್ದಾರೆ. ಅವರು ಬರೆದಿರುವ ಪತ್ರದಲ್ಲಿ ಬೆಳಗಾವಿಯನ್ನು 'ಬೆಳಗಾಂವ' ಎಂದು ಬರೆಯುವ ಮೂಲಕ ಉದ್ಧಟತನ ತೋರಿಸಿದ್ದಾರೆ.
ಡಿಸೆಂಬರ್ 19 ರಂದು ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಮಹಾಮೇಳಾವ್ ನಡೆಸಲು ಎಂಇಎಸ್ ಸಿದ್ಧತೆಯಲ್ಲಿದೆ. ಮಹಾಮೇಳಾವ್ಗೆ ಅನುಮತಿ ನೀಡದಂತೆ ಕನ್ನಡ ಸಂಘಟನೆಗಳು ಆಗ್ರಹಿಸಿವೆ. ಬೆಳಗ್ಗೆ 11.30 ಕ್ಕೆ ಬೆಳಗಾವಿಗೆ ಆಗಮಿಸಿ ಅಂದು ಮಧ್ಯಾಹ್ನ 1.30ಕ್ಕೆ ವಾಪಸ್ ಆಗುವುದಾಗಿ ಮಾನೆ ತಿಳಿಸಿದ್ದು, ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ ಎನ್ನಲಾಗ್ತಿದೆ.
ವರದಿ ಕೇಳಿದ ಬೆಳಗಾವಿ ಡಿಸಿ ನಿತೇಶ್ ಪಾಟೀಲ್: ಎಂಇಎಸ್ ಮಹಾವೇಳಾವ್‌ಗೆ ಸಂಸದ ಧೈರ್ಯಶೀಲ ಮಾನೆ ಆಗಮಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿ, ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಎಸ್‌ಪಿ ಬಳಿ ವರದಿ ಕೇಳಿದ್ದಾರೆ. ಸಂಸದರ ಆಗಮನದಿಂದ ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತಾ, ಇಲ್ವಾ ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಎಂಇಎಸ್ ಪುಂಡರನ್ನು ಹದ್ದುಬಸ್ತಿನಲ್ಲಿಡಲು ನಮಗೆ ಗೊತ್ತಿದೆ: ಸಿಎಂ
ಈ ವರದಿ ಬಂದ ಬಳಿಕ ಮಹಾ ಸಂಸದ ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ತೀರ್ಮಾನ ಮಾಡಲು ಬೆಳಗಾವಿ ಜಿಲ್ಲಾಧಿಕಾರಿ ನಿರ್ಧಾರ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಉಭಯ ರಾಜ್ಯಗಳು ಪರಸ್ಪರರ ಪ್ರದೇಶಗಳ ಮೇಲೆ ಬೇಡಿಕೆ ಇಡಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ತಿಳಿಸಿದ್ದರು.