ಬೆಳಗಾವಿ: ಸದಾ ಕಾಲ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಪತ್ರಕರ್ತರ ಕಲ್ಯಾಣಕ್ಕಾಗಿ ಸ್ಥಾಪಿಸಲಾಗಿರುವ ಬೆಳಗಾವಿ ಪತ್ರಕರ್ತರ ಸಂಘವನ್ನು ಮತ್ತಷ್ಟು ಬಲಪಡಿಸುವ ಕಾರ್ಯವಾಗಬೇಕಿದೆ. ಆದ್ದರಿಂದ ಅದಕ್ಕೆ ಬೇಕಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಪತ್ರಕರ್ತರಿಗೆ ವಿಮಾ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಒತ್ತಾಯಿಸುವುದು ಸೇರಿದಂತೆ ಇನ್ನಿತರೆ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಸಭಾಭವನದಲ್ಲಿ ನಿನ್ನೆ ನಡೆದ ಬೆಳಗಾವಿ ಪತ್ರಕರ್ತರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಪತ್ರಕರ್ತರ ಕೆಲಸ ಸದಾಕಾಲ ಸಮಾಜದ ಏಳಿಗೆ ಹಾಗೂ ಜನರ ಮಧ್ಯೆಯೇ ಮಾಡುವಂತಹದ್ದಾಗಿದೆ. ಆದರೆ ದೇಶಾದ್ಯಂತ ಮಹಾಮಾರಿ ಕೊರೊನಾಗೆ ಅನೇಕ ಜನರು ಹಾಗೂ ಪತ್ರಕರ್ತರು ಬಲಿಯಾಗಿದ್ದಾರೆ. ಆದ್ದರಿಂದ ಕೊರೊನಾ ಸೋಂಕಿಗೆ ಒಳಗಾದ ಹಾಗೂ ಬಲಿಯಾಗಿರುವ ಪತ್ರಕರ್ತರ ಆಸ್ಪತ್ರೆ ವೆಚ್ಚ ಹಾಗೂ ಸಾವನ್ನಪ್ಪಿದವರಿಗೆ ಕನಿಷ್ಠ 30 ಲಕ್ಷ ರೂ. ಪರಿಹಾರ ನೀಡಲು ಸರ್ಕಾರವನ್ನು ಒತ್ತಾಯಿಸುವ ಬಗ್ಗೆ ತೀರ್ಮಾನಿಸಲಾಯಿತು.
ಇದೇ ವೇಳೆ ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ, ಮಹಾನಗರ ಪಾಲಿಕೆಯ ಕನ್ನಡದ ಮೊದಲ ಮೇಯರ್ ಡಾ. ಸಿದ್ದನಗೌಡ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಎ.ಜಿ.ಮುಳವಾಡಮಠ, ಕನ್ನಡ ಹೋರಾಟಗಾರ ಶಶಿಧರ ಘೀವಾರಿ, ಮಾಜಿ ಶಾಸಕ ಬಿ.ಐ.ಪಾಟೀಲ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.
ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಶೈಲ ಮಠದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಹೇಶ ವಿಜಾಪೂರ, ಕೋಶಾಧ್ಯಕ್ಷ ರಾಯಣ್ಣ ಆರ್.ಸಿ., ಕಾರ್ಯಾಧ್ಯಕ್ಷ ಕುಂತಿನಾಥ ಕಲಮನಿ, ಮಲ್ಲಿಕಾರ್ಜುನ ಮುಗಳಿ, ಕಾರ್ಯದರ್ಶಿ ಸುರೇಶ ನೇರ್ಲಿ, ಜಂಟಿ ಕಾರ್ಯದರ್ಶಿಗಳಾದ ಸುನೀಲ ಪಾಟೀಲ, ಜಗದೀಶ ವಿರಕ್ತಮಠ, ಖಜಾಂಚಿಗಳಾದ ಮಂಜುನಾಥ ಕೋಳಿಗುಡ್ಡ, ಭರಮಗೌಡ ಪಾಟೀಲ ಉಪಸ್ಥಿತರಿದ್ದರು.