ಚಿಕ್ಕೋಡಿ: ಜನ ಹಾಗೂ ಜಾನುವಾರುಗಳ ಜೀವನಾಡಿ ಆಗಿರುವ ಕೃಷ್ಣೆಯ ಒಡಲು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಜನತೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಮೊದಲೇ ಬರಗಾಲದ ಛಾಯೆ ಆವರಿಸುವ ಈ ಪ್ರದೇಶದಲ್ಲಿ ಕುಡಿಯುವ ನೀರಿನ ಮೂಲಾಧಾರವಾಗಿದ್ದ ಕೃಷ್ಣೆಯ ಒಡಲು ಬತ್ತುತ್ತಿರುವುದನ್ನು ಗಮನಿಸಿದರೆ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಲಕ್ಷಣಗಳು ಕಾಣುತ್ತಿವೆ.
ಈ ನಿಟ್ಟಿನಲ್ಲಿ ನದಿಗೆ ಕೂಡಲೇ ಮಹಾರಾಷ್ಟ್ರದ ಡ್ಯಾಂಗಳಿಂದ ನೀರು ಬಿಡುವ ವ್ಯವಸ್ಥೆ ಮಾಡುವಂತೆ , ಅಥಣಿ, ಕಾಗವಾಡ, ಚಿಕ್ಕೋಡಿ, ರಾಯಬಾಗ ಭಾಗದ ರೈತರು ಮತ್ತು ಜನರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.
ಡ್ಯಾಂಗಳು ಭರ್ತಿ
ಕಳೆದ ಬಾರಿ ಮಹಾರಾಷ್ಟ್ರದ ರಾಜ್ಯದಲ್ಲಿ ಮಳೆ ಚೆನ್ನಾಗಿ ಸುರಿದಿರುವುದರಿಂದ ಸದ್ಯ ಅಲ್ಲಿನ ಎಲ್ಲ ಪ್ರಮುಖ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ. ಹೀಗಾಗಿ, ಕೊಯ್ನಾ ಸೇರಿದಂತೆ ಅಗತ್ಯವಿರುವ ಎಲ್ಲ ಡ್ಯಾಂಗಳಿಂದ ನೀರು ಬಿಡಿಸುವಲ್ಲಿ ಜನಪ್ರತಿನಿಧಿಗಳು ಆಸಕ್ತಿ ತೋರಿಸಬೇಕಾಗಿದೆ.
ಮಾರ್ಚ್ ಕೊನೆಯೊಳಗಾಗಿ ಕೃಷ್ಣಾ ನದಿಗೆ 2 ಟಿ.ಎಂ.ಸಿ ಅಡಿ ನೀರು ಬಿಡುವ ವ್ಯವಸ್ಥೆ ಆಗಬೇಕಿದೆ. ಏಕೆಂದರೆ ಸಂಪೂರ್ಣ ಬರಿದಾದ ನಂತರ ನದಿಗೆ ನೀರು ಬಿಟ್ಟರೂ ಪ್ರಯೋಜನವಿಲ್ಲ. ಕಳೆದ ಒಂದು ವಾರದಿಂದ ಕೃಷ್ಣಾ ನದಿಯ ನೀರಿನ ಪಾತ್ರ ಇಳಿಕೆಯಾಗುತ್ತಿದ್ದು, ಬರುವ 8-10 ದಿನಗಳಲ್ಲಿ ಕೃಷ್ಣೆಯ ಒಡಲು ಬತ್ತುವ ಆತಂಕ ಎದುರಾಗಿದೆ.