ಅಥಣಿ: ತಾಲೂಕಿನ ಐಗಳಿ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ಕಳೆದ 22 ರಂದು ವಿದ್ಯುತ್ ಅವಘಡದಿಂದ ಇಬ್ಬರು ಪವರ್ ಮ್ಯಾನ್ಗಳು ತೀವ್ರವಾಗಿ ಗಾಯಗೊಂಡಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಒಬ್ಬರು ಸಾವನ್ನಪ್ಪಿದ್ದಾರೆ.
ಆಕಾಶ ಕುಲಕರ್ಣಿ (23) ಚಿಕಿತ್ಸೆ ಫಲಕಾರಿಯಾಗದೇ ಇವತ್ತು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಕೊಕಟನೂರ ವಿದ್ಯುತ್ ವಿತರಣಾ ಅಧಿಕಾರಿ ಬಿ ಎಲ್ ಬುಲಗೌಡ ತಿಳಿಸಿದರು.
ಇನ್ನೋರ್ವ ಪವರ್ ಮ್ಯಾನ್ ರವಸಾಬ ಜಾದವ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯ ವಿವರ: ಐಗಳಿ 110 ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ಬ್ರೇಕರ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಾಗ ರೀಪೇರಿಗೆ ಎಂದು ಕಂಬದ ಮೇಲೆ ಹತ್ತಿದಾಗ ವಿದ್ಯುತ್ ಅವಘಡ ಸಂಭವಿಸಿತ್ತು. ಮೃತ ಆಕಾಶ ಅವರ ತಂದೆ ವಿದ್ಯುತ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೇಳೆ ಮೃತಪಟ್ಟಿದ್ದರು. ಅವರ ಕೆಲಸವನ್ನು ಆಕಾಶಗೆ ಕೊಡಲಾಗಿತ್ತು.
ಇನ್ನು ಯುವಕ ಆಕಾಶ್ ಕುಲಕರ್ಣಿ ಅಕಾಲಿಕ ಮರಣದಿಂದ ನಮಗೆ ತೀವ್ರ ನೋವಾಗಿದೆ ಎಂದು ಐಗಳಿ ಕೊಕಟನೂರ ವಿದ್ಯುತ್ ವಿತರಣಾ ಕೇಂದ್ರದ ಅಭಿಯಂತರರು ಸಂತಾಪ ಸೂಚಿಸಿದ್ದಾರೆ.